ಉರ್ದು ಪ್ರೌಢಶಾಲೆ ಮಂಜೂರು ಮಾಡಲು ಶಿಕ್ಷಣ ಸಚಿವರಿಗೆ ಮನವಿ

ವಿಜಯಪುರ, ಎ.9-ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ 9 ಹಾಗೂ 10ನೇ ತರಗತಿ ಉರ್ದು ಪ್ರೌಢಶಾಲೆ ವಿದ್ಯಾರ್ಥಿನಿಯರಿಂದ ಮಂಜೂರು ಮಾಡಲು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ನಮ್ಮ ಸ್ವಗ್ರಾಮವಾದ ಉಕ್ಕಲಿಯಲ್ಲಿ ಈಗಾಗಲೇ ನಾವು 8ನೇ ತರಗತಿಯವರೆಗೆ ಶಿಕ್ಷಣ ಮುಗಿಸಿದ್ದು, 9ನೇ ತರಗತಿಯಲ್ಲಿ ಓದಬೇಕೆಂದರೆ ಪರ ಊರಿಗೆ ಪ್ರಯಾಣ ಮಾಡಿ ಓದಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದ್ದು, ಒಂದು ವೇಳೆ ತಾವು ನಮ್ಮ ಊರಿನಲ್ಲಿ 9 ಹಾಗೂ 10ನೇ ವರ್ಗಕ್ಕೆ (ಉರ್ದು ಪ್ರೌಢ ಶಾಲೆಗೆ) ಅನುಮತಿ ನೀಡದಿದ್ದರೆ, ನಮ್ಮ ಮುಂದಿನ ಓದುವ ಕನಸು ಕನಸಾಗಿಯೇ ಉಳಿಯುತ್ತದೆ. ಘನ ಸರ್ಕಾರದ ಆಶಯವಾದ ಹಾಗÀೂ ಮಾನ್ಯ ಪ್ರಧಾನಮಂತ್ರಿಗಳ ಹೃದಯದಾಳದ ಬಯಕೆಯಾದ ಭೇಟಿ ಬಚಾವೋ ಬೇಟಿ ಫಡಾವೋ ಕೇವಲ ಘೋಷಣೆಯಾಗಿ ಉಳಿಯುತ್ತದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಭಾಗ್ಯ ತಮ್ಮಿಂದ ತೆರೆಯಲಿ ನಾವಿಂದು ಅಕ್ಷರವಂತರಾದರೆ ನಮ್ಮ ಭವಿಷ್ಯ ಉಜ್ವಲವಾಗುತ್ತದೆ ನಾವು ಜೀವನಪೂರ್ತಿ ತಮಗೆ ಋಣಿಯಾಗಿರುತ್ತೇವೆ.
ಕಾರಣ ದಯಾಳುಗಳಾದ ತಾವು ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಈ ಶೈಕ್ಷಣಿಕ ವರ್ಷದಿಂದಲೇ ನಮ್ಮ ಉಕ್ಕಲಿ ಊರಿನಲ್ಲಿಯೇ ಉರ್ದು ಪ್ರೌಢಶಾಲೆ ಅಂದರೆ 9ನೇ ಹಾಗೂ 10ನೇ ವರ್ಗ ಪ್ರಾರಂಭಿಸಬೇಕೆಂದು ಮನವಿ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಉಕ್ಕಲಿ ಎಸ್.ಡಿ.ಎಂ.ಸಿ. ಸಮಿತಿಯ ಅಧ್ಯಕ್ಷರಾದ ಹಾಫೀಜ ಅಬ್ದುಲ್ ರಹಮಾನ್ ಮಕಾಂದಾರ ಇವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರ ಪಾಲಕರು, ಹಾಗೂ ಉಕ್ಕಲಿ ಗ್ರಾಮದ ಅಂಜುಮನ ಕಮೀಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.