
ಕೆ.ಆರ್.ಪೇಟೆ: ಮಾ.24:- ಬಿಜೆಪಿಯವರು ಸೃಷ್ಠಿಸಿದ್ದ ಉರೀಗೌಡ ಮತು ದೊಡ್ಡ ನಂಜೇಗೌಡರನ್ನು ಕುರಿತ ಟಿಪ್ಪು ವಿವಾದಕ್ಕೆ ಸೂಕ್ತ ತಿಳುವಳಿಕೆ ನೀಡಿ ತಾರ್ಕಿಕ ಅಂತ್ಯ ಹಾಡಲು ಮುಂದಾದ ಚುಂಚಶ್ರೀಗಳಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ನಿಲುವನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಸ್ವಾಗತಿಸಿದ್ದು ಸ್ವಾಮೀಜಿಯವರ ಸಾಮಾಜಿಕ ಕಳಕಳಿಗೆ ಗೌರವ ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಎಂ.ಡಿ.ಕೃಷ್ಣಮೂರ್ತಿ ಸ್ವಾಮೀಜಿಯವರ ಸಾಮಾಜಿಕ ಕಳಕಳಿಯನ್ನು ಅಭಿನಂಧಿಸಿದರು.
ಉರೀಗೌಡ ಮತ್ತು ದೊಡ್ಡನಂಜೇಗೌಡ ಕಾಲ್ಪನಿಕ ವ್ಯಕ್ತಿಗಳು. ಇವರು ಟಿಪ್ಪುವನ್ನು ಕೊಂದ ಬಗ್ಗೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ. ರಾಜ್ಯ ಬಿಜೆಪಿ ಮುಖಂಡರು ಚುನಾವಣೆಯ ಸಂದರ್ಭದಲ್ಲಿ ಜನರಲ್ಲಿ ಮತಾಂಧತೆ ಮತ್ತು ಧಾರ್ಮಿಕ ಭಾವನೆಯನ್ನು ಕೆರಳಿಸುವ ವ್ಯವಸ್ಥಿತ ಸಂಚು ನಡೆಸಿದ್ದು ಅದಕ್ಕಾಗಿ ಟಿಪ್ಪು ಹೆಸರನ್ನು ಎಳೆತರುವ ಪ್ರಯತ್ನ ನಡೆಸಿದ್ದಾರೆ.
ಟಿಪ್ಪು ಹೆಸರಿಗೆ ಉರೀಗೌಡ ಮತ್ತು ದೊಡ್ಡ ನಂಜೇಗೌಡರ ಹೆಸರನ್ನು ತಳಕು ಹಾಕಿ ಒಕ್ಕಲಿಗ ಸಮಾಜಕ್ಕೆ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಳೆದ ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿದೆ. ಅದಕ್ಕೂ ಹಿಂದೆ ಕೆಲವು ವರ್ಷ ಆಡಳಿತ ನಡೆಸಿದೆ. ಆಗ ಇವರಿಗೆ ಗೊತ್ತಿಲ್ಲದ ಉರೀಗೌಡ ಮತ್ತು ದೊಡ್ಡ ನಂಜೇಗೌಡ ಚುನಾವಣೆಯ ಸಂದರ್ಭದಲ್ಲಿ ಅರಿವಿಗೆ ಬಂದಿದ್ದಾದರೂ ಹೇಗೆ? ಎಂದು ಪ್ರಶ್ನಿಸಿದ ಎಂ.ಡಿ.ಕೃಷ್ಣಮೂರ್ತಿ ಕಾಂಗ್ರೆಸ್ ಪಕ್ಷದ ಜನಪ್ರಿಯತೆಯಿಂದ ಬೆದರಿರುವ ಬಿಜೆಪಿಗರೂ ಹಿಂದೂ-ಮುಸ್ಲಿಂ ವಿಷ ಬೀಜವನ್ನು ಭಿತ್ತಿ ಜನರನ್ನು ಬಾವನಾತ್ಮಕವಾಗಿ ಕೆರಳಿಸುವ ಸಂಚು ನಡೆಸುತ್ತಿದ್ದಾರೆ. ಬಿಜೆಪಿಗರ ಸಂಚಿಗೆ ಒಕ್ಕಲಿಗ ಸಮಾಜ ಬಲಿಯಾಗದಂತೆ ಚುಂಚಶ್ರೀಗಳು ಸಕಾಲಿಕವಾಗಿ ಮಧ್ಯ ಪ್ರವೇಶಿಸಿ ಉರೀಗೌಡ, ದೊಡ್ಡ ನಂಜೇಗೌಡರ ಬಗ್ಗೆ ಸಿನಿಮಾ ಮಾಡುವ ಶಾಸಕ ಮುನಿರತ್ನ ಅವರಿಗೆ ಸೂಕ್ತ ತಿಳುವಳಿಕೆ ನೀಡಿ ಒಕ್ಕಲಿಗ ಸಮಾಜದ ಘನತೆ ಗೌರವಗಳನ್ನು ಎತ್ತಿಹಿಡಿದ್ದಾರೆ. ಇದಕ್ಕಾಗಿ ಚುಂಚಶ್ರೀಗಳು ಸರ್ವ ಸಮಾಜದ ಶ್ಲಾಘನೆಗೆ ಪಾತ್ರರಾಗಿದ್ದಾರೆಂದರು.
ಎಲ್ಲಿಂದಲೂ ಹೊಟ್ಟೆ ಪಾಡಿಗಾಗಿ ಕರ್ನಾಟಕಕ್ಕೆ ಬಂದ ಮುನಿರತ್ನನಿಗೆ ಕರ್ನಾಟಕದ ಇತಿಹಾಸ ಮತ್ತು ಪರಂಪರೆಯ ಅರಿವಿಲ್ಲ.
ಸಿನಿಮಾ ಮಾಡುವಾಗ ನೆಲದ ಇತಿಹಾಸ ಮತ್ತು ಸಂಸ್ಕøತಿಯ ಅರಿವನ್ನು ಸಿನಿಮಾ ಜನ ಮೂಡಿಸಿಕೊಳ್ಳುವಂತೆ ಸಲಹೆ ನೀಡಿದ ಎಂ.ಡಿ.ಕೃಷ್ಣಮೂರ್ತಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಭರವಸೆಗಳ ಬಗ್ಗೆ ಪ್ರಸ್ತಾಪಿಸಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ತಾಲೂಕು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಕೆ.ಬಿ.ಪ್ರತಿಮ, ಮುಖಂಡರಾದ ಕುಮಾರ್, ಅನಿಲ್, ಸಿದ್ದಲಿಂಗು, ಕರೋಟಿ ಸುನೀಲ್ ಮತ್ತಿತರರಿದ್ದರು