ಉಯ್ಘರ್ ನಾಗರಿಕರಿಂದ ಬಲವಂತದ ದುಡಿಮೆ:

ಒಂಟಾರಿಯೊ (ಕೆನಡಾ), ಜು.೧೨- ಚೀನಾದ ಕ್ಷಿನ್ಝಿಯಾಂಗ್‌ನಲ್ಲಿ ಉಯ್ಘರ್ ಜನಾಂಗದ ನಾಗರಿಕರನ್ನು ಬಲವಂತವಾಗಿ ಕಾರಾಗೃಹದಲ್ಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಾರಾಗೃಹಗಳಲ್ಲಿ ಬಲವಂತವಾಗಿ ಇರಿಸಲಾಗಿರುವ ಕಾರ್ಮಿಕರಿಂದ ಕೆಲಸ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿಖ್ಯಾತ ಕಂಪೆನಿಗಳಾದ ನೈಕ್ ಕೆನಡಾ ಹಾಗೂ ಚಿನ್ನದ ಗಣಿಗಾರಿಕೆ ಕಂಪೆನಿ ಮೇಲೆ ಕೆನಡಾ ಸರ್ಕಾರ ತನಿಖೆ ಪ್ರಾರಂಭಿಸಿದೆ.
ಉಯ್ಘರ್ ನಾಗರಿಕರಿಂದ ಬಲವಂತವಾಗಿ ಕೆಲಸ ಮಾಡಿಕೊಂಡಿದೆ ಎಂದು ಆರೋಪಿಸಿ ಮಾನವ ಹಕ್ಕುಗಳ ಗುಂಪುಗಳ ಒಕ್ಕೂಟ ಸಲ್ಲಿಸಿದ ದೂರಿನನ್ವಯ ಇದೀಗ ಕೆನಡಾ ಸರ್ಕಾರ ತನಿಖೆ ಚುರುಕುಗೊಳಿಸಿದ್ದು, ಸಹಜವಾಗಿಯೇ ಇದು ಚೀನಾಗೆ ದೊಡ್ಡ ಹಿನ್ನಡೆ ತಂದಿದೆ. ಇನ್ನು ತನಿಖೆಗೆ ಸಂಬಂಧಿಸಿದಂತೆ ಎರಡೂ ಸಂಸ್ಥೆಗಳು ಪ್ರತಿಕ್ರಿಯೆ ನೀಡಿದೆ. ಉಯ್ಘರ್ ನಾಗರಿಕರನ್ನು ಬಲವಂತವಾಗಿ ಕೆಲಸ ಮಾಡಿಸಿಕೊಳ್ಳುತ್ತಿರುವ ಸಂಸ್ಥೆಗಳ ಜೊತೆ ನಾವು ಸಂಬಂಧ ಇರಿಸಿಕೊಂಡಿಲ್ಲ ಎಂದು ನೈಕ್ ತಿಳಿಸಿದರೆ ನಾವು ಕ್ಷಿನ್ಝಿಯಾಂಗ್ ಪರಿಸರವನ್ನು ಹಿಂದೆಯೇ ತ್ಯಜಿಸಿದ್ದೆವು ಎಂದು ಚಿನ್ನದ ಗಣಿಗಾರಿಕಾ ಕಂಪೆನಿ ತಿಳಿಸಿದೆ. ಚೀನಾದ ಕ್ಷಿನ್ಝಿಯಾಂಗ್ ಪ್ರದೇಶದಲ್ಲಿ ವಾಸಿಸುವ ಜನಾಂಗೀಯ ಮುಸ್ಲಿಂ ಅಲ್ಪಸಂಖ್ಯಾತ ಉಯ್ಘರ್ ನಾಗರಿಕರ ವಿರುದ್ಧ ಚೀನಾ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ೨೦೨೨ ರಲ್ಲಿ ವಿಶ್ವಸಂಸ್ಥೆ ವರದಿ ಮಾಡಿತ್ತು.