ಉಮ್ಮತ್ತೂರು ಶ್ರೀ ಉರುಕಾತೇಶ್ವರಿ ದೇವಸ್ಥಾನ ಬಂದ್, ಹೊರಗೆ ಪೂಜೆ ಸಲ್ಲಿಸಿದ ಭಕ್ತರು!

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.07- ತಾಲೂಕಿನ ಉಮ್ಮತ್ತೂರಿನಲ್ಲಿರುವ ಶ್ರೀ ಉರುಕಾತೇಶ್ವರಿ ಅಮ್ಮನವರ ದೇವಸ್ಥಾನದ ಕೀಯನ್ನು ಟ್ರಸ್ಟ್‍ಗೆ ನೀಡುವಂತೆ ಹೈಕೋರ್ಟ್ ಅದೇಶದ ಹಿನ್ನೆಲೆಯಲ್ಲಿ ತಿಂಗಳ ಮೊದಲ ಮಂಗಳವಾರ ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಬಾಗಿಲು ಬೀಗ ತೆಗೆಯದೆ ಕಾರಣ ಭಕ್ತರು ದೇವಿಯ ದರ್ಶನ ಇಲ್ಲದೇ ಹೊರಗೆಯೇ ಪೂಜೆ ಸಲ್ಲಿಸಬೇಕಾಯಿತು.
ತಾಲೂಕಿನ ಉಮ್ಮತ್ತೂರು ಶ್ರೀ ಉರುಕಾತೇಶ್ವರಿ ಅಮ್ಮನ ದೇವಸ್ಥಾನದ ಆಡಳಿತ ಮಂಡಲಿ ಹಾಗೂ ಟ್ರಸ್ಟ್ ವಿರುದ್ದವಾಗಿದ್ದವರ ನಡುವೆ ಭಿನ್ನಾಪ್ರಾಯ ಉಂಟಾಗಿ, ಅಂತಿಮವಾಗಿ ದೇವಸ್ಥಾನ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ನೀಡಲಾಗಿತ್ತು. ಅದರಂತೆ ಪ್ರತಿ ತಿಂಗಳ ಮೊದಲ ಮಂಗಳವಾರ ತಹಶೀಲ್ದಾರ್ ದೇವಸ್ಥಾನದ ಬಾಗಿಲು ತೆರೆದು ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರು.
ಆದರೆ, ಇತ್ತಿಚೆಗೆ ಶ್ರೀ ಉರುಕಾತೇಶ್ವರ ಆಡಳಿತ ಮಂಡಳಿಯ ಅವರು ಇದರ ವಿರುದ್ದ ಹೈಕೋರ್ಟ್‍ನಲ್ಲಿ ದಾವೆ ಹೂಡಿ ಮತ್ತೆ ಟ್ರಸ್ಟ್ ಅಧೀನಕ್ಕೆ ದೇವಸ್ಥಾನ ನೀಡಬೇಕೆಂಬ ತೀರ್ಪು ಬಂದ ಹಿನ್ನೆಲೆಯಲ್ಲಿ ಟ್ರಸ್ಟ್ ಅವರು ದೇವಸ್ಥಾನದ ಕೀ ನೀಡಿ, ಪೂಜೆ ಕೈಂಕರ್ಯಗಳನ್ನು ಸಲ್ಲಿಸಲು ಆಡಳಿತ ಮಂಡಲಿಗೆ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳು, ಹಾಗೂ ತಹಶೀಲ್ದಾರ್‍ಗೆ ಮನವಿ ಮಾಡಿಕೊಂಡಿದ್ದರು. ಮತ್ತೊಂದು ಕಡೆ ಟ್ರಸ್ಟ್ ವಿರುದ್ದವಾಗಿರುವ ಗುಂಪು ಹೈಕೋರ್ಟ್ ಆದೇಶ ಪುನರ್ ಪರಿಶೀಲನೆ ಮಾಡುವಂತೆ ಮೇಲ್ಮನವಿಗೆ ಹೋಗಿದ್ದರು.
ಅಲ್ಲದೇ ತಹಶೀಲ್ದಾರ್ ಸಹ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಿದ್ದರು. ಈ ಕಾರಣಕ್ಕಾಗಿ ದೇವಸ್ತಾನದ ಬಾಗಿಲು ತೆರೆದರೆ ಗೊಂದಲ ಹಾಗೂ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಧಕ್ಕೆಯಾಗಬಹುದೆಂಬ ಕಾರಣದಿಂದ ಮುಂದಿನ ಆದೇಶದವರೆಗೆ ದೇವಸ್ಥಾನದ ಬಾಗಿಲು ತೆರೆಯದಿರಲು ತೀರ್ಮಾನಿಸಿದ್ದರು. ಗ್ರಾಮದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
ಬಾಗಿಲಲ್ಲೇ ಪೂಜೆ ಸಲ್ಲಿಸಿದ ಭಕ್ತರು: ಪ್ರತಿ ತಿಂಗಳು ಮೊದಲ ಮಂಗಳವಾರ ಪೂಜೆ ಸಲ್ಲಿಸಲು ಆಗಮಿಸಿದ್ದ ಭಕ್ತರು ದೇವಸ್ಥಾನ ಮುಚ್ಚಿದ್ದರಿಂದ ಬಾಗಿಲ ಮುಂದೆ ನಿಂತು ದೇವಿಗೆ ಪೂಜೆ ಸಲ್ಲಿಸಿದರು. ಚಾ.ನಗರ ಜಿಲ್ಲೆಯ ಅಲ್ಲದೇ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಶ್ರೀ ಉರುಕಾತೇಶ್ವರಿ ಅಮ್ಮನ ದೇವಸ್ತಾನಕ್ಕೆ ಹೆಚ್ಚಿನ ಭಕ್ತರು ಬರುತ್ತಿದ್ದರು. ಈ ವಾರ ಟ್ರಸ್ಟ್ ಹಾಗೂ ಮುಜರಾಯಿ ಇಲಾಖೆಯ ಗೊಂದಲದಿಂದಾಗಿ ದೇವಸ್ಥಾನದ ಬಾಗಿಲು ತೆರೆಯಲಿಲ್ಲ. ಹೀಗಾಗಿ ಭಕ್ತರು ನಿರಾಸೆಯಿಂದ ದೇವಿಯ ದರ್ಶನ ಭಾಗ್ಯ ಸಿಗಲಿಲ್ಲ. ಮುಂದಿನ ತಿಂಗಳಾದರು ಸಮಸ್ಯೆ ಬಗೆಹರಿದು ದೇವಿಯ ದರ್ಶನ ದೊರೆಯಲಿ ಎಂದು ಪ್ರಾರ್ಥಿಸಿಕೊಂಡರು.
ಸ್ಥಳಕ್ಕೆ ತಹಶೀಲ್ದಾರ್ ಬಸವರಾಜು ತೆರಳಿ ದೇವಸ್ಥಾನದ ಮುಂದೆ ನಾಮಫಲಕ ಅಳವಡಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸಿದರು. ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪೊಲೀಸರು ಇದ್ದರು.