ಉಮೇಶ್ ಪಾಲ್ ಹತ್ಯೆ ಮತ್ತೊಬ್ಬ ಆರೋಪಿ ಎನ್ ಕೌಂಟರ್

ಲಕ್ನೋ(ಉತ್ತರ ಪ್ರದೇಶ),ಮಾ.೬- ಬಿಎಸ್‌ಪಿ ನಾಯಕ ರಾಜು ಪಾಲ್ ಕೊಲೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾರದ ಹಿಂದೆ ರಾಜ್ಯ ಪೊಲೀಸರು ಮತ್ತೆ ಎನ್‌ಕೌಂಟರ್ ನಡೆಸಿದ್ದು, ಮತ್ತೊಬ್ಬ ಆರೋಪಿ ಸಾವನ್ನಪ್ಪಿದ್ದಾನೆ.
ಕೆಲ ದಿನಗಳ ಹಿಂದೆ ಎನ್ ಕೌಂಟರ್ ನಡೆಸಿ ಆರೋಪಿಯೊಬ್ಬನನ್ನು ಪೊಲೀಸರು ಬಲಿ ತೆಗೆದುಕೊಂಡಿದ್ದರು.
ಉಮೇಶ್ ಪಾಲ್ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದ್ದ ಅತೀಕ್ ಅಹ್ಮದ್ ಗ್ಯಾಂಗ್‌ನ ಶೂಟರ್ ವಿಜಯ್ ಕುಮಾರ್ ಅಲಿಯಾಸ್ ಉಸ್ಮಾನ್ ಚೌಧರಿ ಮೇಲೆ ಉತ್ತರ ಪ್ರದೇಶದ ಪೊಲೀಸರು ನಿನ್ನೆ ಪ್ರಯಾಗ್‌ರಾಜ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದು, ಆರೋಪಿ ಸಾವನ್ನಪ್ಪಿದ್ದಾನೆ.
ಆರೋಪಿ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ನಗರದ ಸ್ವರೂಪ್ ರಾಣಿ ನೆಹರು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆತ ಅಲ್ಲಿ ಸಾವನ್ನಪ್ಪಿದ್ದಾನೆ.
ಘಟನೆ ವಿವರ:
೨೦೦೫ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ ಒಂದು ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಕಳೆದ ತಿಂಗಳು ಉಮೇಶ್ ಪಾಲ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ ೪೦ ಜನರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ. ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್, ಆತನ ಸಹೋದರ ಮತ್ತು ಮಾಜಿ ಶಾಸಕ ಅಶ್ರಫ್ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ಇವರಿಬ್ಬರೂ ಸದ್ಯ ಜೈಲಿನಲ್ಲಿದ್ದಾರೆ.
ಕಳೆದ ವಾರ ಉತ್ತರ ಪ್ರದೇಶದ ಪೊಲೀಸರು ಪ್ರಕರಣದ ಒಬ್ಬ ಆರೋಪಿಯನ್ನು ಗುಂಡಿಕ್ಕಿ ಕೊಂದ ಬಳಿಕ ತನ್ನ ಮೇಲೂ ಎನ್‌ಕೌಂಟರ್ ನಡೆಸಬಹುದು ಎಂದು ಭೀತಿ ವ್ಯಕ್ತಪಡಿಸಿದ್ದ ಅಶ್ರಫ್ ಜೈಲಿನಲ್ಲಿದ್ದುಕೊಂಡೇ ತನ್ನನ್ನು ದಯವಿಟ್ಟು ಜೈಲಿನಿಂದ ಹೊರಗೆ ಕಳುಹಿಸಬೇಡಿ ಎಂದು ಕೋರ್ಟ್‌ಗೆ ಮನವಿ ಸಲ್ಲಿಸಿದ್ದ.