ಉಮೇಶ್ ಕತ್ತಿ ರಾಜೀನಾಮೆಗೆ ಜೆಡಿಎಸ್ ಆಗ್ರಹ

ವಿಜಯಪುರ, ಏ. ೩೦-ದೇಶದೆಲ್ಲೆಡೆ ಕೊರೊನಾ ೨ ನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದ್ದು, ಜನ ತಮ್ಮ ಆರೋಗ್ಯ ಕಾಪಾಡಿಕೊಳ್ಳಲಾಗದೇ, ಊರುಗಳಿಗೆ ವಲಸೆ ಹೊರಟಿದ್ದು, ಉದ್ಯೋಗಗಳಿಲ್ಲದೇ, ಸಂಪಾದನೆಯಿಲ್ಲದೇ, ಜೀವನವೇ ನರಕ ಸದೃಶವಾಗಿರುವಂತಹ ಸಂದರ್ಭದಲ್ಲಿ ಸರಕಾರ ನೀಡುವ ಪಡಿತರವನ್ನು ಹೆಚ್ಚು ಮಾಡಲು ಕೇಳಿದ ರೈತನಿಗೆ ಸಾಯಲು ಹೇಳಿದ ಆಹಾರ ಸಚಿವ ಉಮೇಶ್ ಕತ್ತಿರವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವೇ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಸಂಪುಟದಿಂದ ಕೈ ಬಿಡಬೇಕೆಂದು, ಟೌನ್ ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿ ಭುಜೇಂದ್ರ ಒತ್ತಾಯಿಸಿರುವರು.
ಅವರು ವರದಿಗಾರರೊಂದಿಗೆ ಮಾತನಾಡಿ, ದೇಶ ಎಂದೂ ಕಾಣದಂತಹ ಕೆಟ್ಟ ಪರಿಸ್ಥಿತಿಯೆಡೆಗೆ ಸಾಗುತ್ತಿರುವಾಗ ಗ್ರಾಮೀಣ ಪ್ರದೇಶಗಳಿಗೆ ಪಟ್ಟಣದಿಂದ ಉದ್ಯೋಗಗಳನ್ನು ತೊರೆದು, ಜನತೆ ವಲಸೆ ಬರುತ್ತಿರುವ ಸಂದರ್ಭದಲ್ಲಿ ಸರಕಾರ ನೀಡುತ್ತಿರುವ ೨ ಕೆ.ಜಿ ಅಕ್ಕಿ ಏತಕ್ಕೂ ಸಾಲದಾಗಿದ್ದು, ಹೆಚ್ಚುವರಿಯಾಗಿ ಅಕ್ಕಿ ನೀಡಬೇಕೆಂದು, ಕೇಳಿದ ರೈತನನ್ನು ಸಾಯಲು ಹೇಳಿದ ಸಚಿವರ ಮನಃಸ್ಥಿತಿ ರಾಜ-ಮಹಾರಾಜರುಗಳ ಕಾಲದ ಊಳಿಗಮಾನ್ಯ ಪದ್ದತಿಯ ದೌರ್ಜನ್ಯವನ್ನು ನೆನಪಿಗೆ ತರುತ್ತದೆ. ಜನರ ಮನಕ್ಕೆ ಹಿತವಾಗುವಂತಹ ೨ ಹಿತವಚನ ಹೇಳದಂತಹ ಇಂತಹ ಸಚಿವರು ಪ್ರಜಾಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ಅಸಮರ್ಥರಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿರುವರು.