ಉಮೇದುವಾರಿಕೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥಸಿಂಗ್


ಸಂಜೆವಾಣಿ ವಾರ್ತೆ
ಹೊಸಪೇಟೆ 20: ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‍ರ ಪುತ್ರ ಸಿದ್ಧಾರ್ಥ ಸಿಂಗ್ ಅವರು ಅಪಾರ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಗೆ ಬುಧವಾರ ಬಿಜೆಪಿಯಿಂದ ಉಮೇದುವಾರಿಕೆ ಸಲ್ಲಿಸಿದರು.
ನಗರದ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ 405 ಅಡಿ ಎತ್ತರದ ಧ್ವಜಸ್ತಂಭಕ್ಕೆ ಹಾಗೂ ಭಾರತಾಂಬೆಗೆ ಪೂಜೆ ಸಲ್ಲಿಸಿದ ಬಳಿಕ ಸಹಸ್ರಾರು ಬೆಂಬಲಿಗರು ಹಾಗೂ ಅಭಿಮಾನಿಗಳೊಂದಿಗೆ ವಿಶೇಷ ಅಲಂಕೃತ ಎತ್ತಿನಗಾಡಿ ಏರಿ ಮೆರವಣಿಗೆ ನಡೆಸಿದರು.
ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ಮೆರವಣಿಗೆ ಡಾ. ಅಂಬೇಡ್ಕರ್ ವೃತ್ತ, ಪುನೀತ್ ರಾಜಕುಮಾರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಮದಕರಿ ನಾಯಕ ವೃತ್ತ, ವಾಲ್ಮೀಕಿ ನಾಯಕ ವೃತ್ತದ ಮೂಲಕ ಸಾಗಿ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಮೆರವಣಿಗೆ ಉದ್ದಕ್ಕೂ ಕಾರ್ಯಕರ್ತರು, ಭಾರತ ಮಾತಾಕೀ ಜೈ, ವಂದೇ ಮಾತರಂ, ಬಿಜೆಪಿ, ಸಚಿವ ಆನಂದ ಸಿಂಗ್ ಹಾಗೂ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಪರ ಜಯ ಘೋಷ ಮೊಳಗಿಸಿದರು.
 1 ಲಕ್ಷ ಮತ ಗಳಿಸುವ ಗುರಿ:
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದಾರ್ಥ ಸಿಂಗ್, ಕ್ಷೇತ್ರದ ಜನರ ಆರ್ಶೀವಾದದಿಂದ ಗೆದ್ದು ನಾನು ಶಾಸಕನಾದರೆ, ವಿಜಯನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವೆ. ಚುನಾವಣೆಯಲ್ಲಿ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದು, ಯಾವುದೇ ರೀತಿಯಲ್ಲಿ ಹಣ ಬಲವನ್ನು ಬಳಕೆ ಮಾಡುತ್ತಿಲ್ಲ. ಚುನಾವಣೆಯಲ್ಲಿ 1 ಲಕ್ಷ ಮತಗಳಿಸುವುದು ನನ್ನ ವೈಯಕಿಕ್ತ ಗುರಿಯಾಗಿದೆ. ಆದರೆ, 50 ಸಾವಿರ ಮತ ಪಡೆಯುವುದಿಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಅಂತಿಮವಾಗಿ ಮತದಾರರು ಅದನ್ನು ನಿರ್ಧರಿಸುತ್ತಾರೆ ಎಂದರು.
ಈಗಾಗಲೇ ಕ್ಷೇತ್ರದಲ್ಲಿ ಗ್ರಾಮೀಣ ಭಾಗದಲ್ಲಿ ಗ್ರಾಮವಾಸ ಜನರ ವಿಶ್ವಾಸ, ಪಟ್ಟಣ ವಾಸ ಮತ್ತು ನಗರ ವಾಸ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳನ್ನು ಅರಿತಿದ್ದೇನೆ. ಅದಕ್ಕೆ ಸರ್ಕಾರಿ ವ್ಯವಸ್ಥೆ ಮೂಲಕ ಅವುಗಳಿಗೆ ಪರಿಹಾರ ಕಲ್ಪಿಸುವ ಆಶಯ ಹೊಂದಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಗೆಲುವು ದಾಖಲಿಸುವ ಮೂಲಕ ವಿಜಯನಗರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಮೂಲಕ ಇಡೀ ರಾಜ್ಯವೇ ವಿಜಯನಗರ ಕ್ಷೇತ್ರದತ್ತ ತಿರುಗಿ ನೋಡುವಂತೆ ಮಾಡುತ್ತೇನೆ. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ ಕಲ್ಪಿಸಿಲ್ಲ. ಜಾತಿ ಆಧಾರದಲ್ಲಿ ಮೀಸಲಾತಿ ನೀಡಲಾಗಿದೆ. ಅದು ಅಲ್ಪಸಂಖ್ಯಾತ ಬಂಧುಗಳಿಗೂ ಗೊತ್ತಿದೆ. ಹಾಗಾಗಿ ಸಚಿವ ಆನಂದ ಸಿಂಗ್ ಅವರಿಗೆ ಬೆಂಬಲ ನೀಡಿರುವಂತೆ ನನಗೂ ಆಶೀರ್ವದಿಸುವ ವಿಶ್ವಾಸವಿದೆ ಎಂದು ಹೇಳಿದರು. ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಹುಡಾ ಅಧ್ಯಕ್ಷ ಅಶೋಕ್ ಜೀರೆ, ನಗರಸಭೆ ಉಪಾಧ್ಯಕ್ಷ ಎಲ್. ಎಸ್. ಆನಂದ, ಸದಸ್ಯ ತಾರಿಹಳ್ಳಿ ಜಂಬುನಾಥ್, ಮುಖಂಡರಾದ ಕಿಚಿಡಿ ಲಕ್ಷ್ಮಣ, ಎಲ್. ಸಿದ್ದನಗೌಡ, ಪ್ರವೀಣ್ ಸಿಂಗ್, ಶ್ಯಾಂ ಸಿಂಗ್, ಸಂದೀಪ್ ಸಿಂಗ್, ಧರ್ಮೇಂದ್ರ ಸಿಂಗ್, ಆರ್.ಕೊಟ್ರೇಶ್, ಜೋಗಯ್ಯ, ಸಮಿವುಲ್ಲಾ, ವೀರಸ್ವಾಮಿ, ಯಂಕಪ್ಪ ಇತರರು ಪಾಲ್ಗೊಂಡಿದ್ದರು.
 ಲಾಠಿ ಏಟು:
ಬೆಳಗ್ಗೆ 11.50ಕ್ಕೆ ಸಿದ್ಧಾರ್ಥ ಸಿಂಗ್ ಮೆರವಣಿಗೆ ಎಸಿ ಕಚೇರಿ ತಲುಪಿತ್ತು. ಮೆರವಣಿಗೆ ಇನ್ನೇನು ಮುಕ್ತಾಯಗೊಳ್ಳಬೇಕು ಎನ್ನುವಷ್ಟರಲ್ಲಿ ಕಾರ್ಯಕರ್ತರ ಘೋಷಣೆಗಳು ಜೋರಾಗಿದ್ದರಿಂದ ಸಿದ್ಧಾರ್ಥ ಸಿಂಗ್ ನಿಂತಿದ್ದ ಎತ್ತಿನಗಾಡಿಯ 
ಎತ್ತುಗಳು ಬೆದರಿದವು. ಈ ವೇಳೆ ಕ್ಷಣಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೆಲವರು ಪೊಲೀಸ್ ಬ್ಯಾರಿಕೇಡ್ ಮೀರಿ, ನಿರ್ಬಂಧಿತ ಪ್ರದೇಶಕ್ಕೆ ಓಡಿದರು. ಗುಂಪು ಚದುರಿಸಲು ಐಟಿಬಿಪಿ ಪೊಲೀಸರು ಲಾಠಿ ರುಚಿ ತೋರಿಸಿದರು. ಬಿಜೆಪಿ ಕಾರ್ಯಕರ್ತ ಹಾಗು ಪೊಲೀಸರೊಬ್ಬರಿಗೆ ಓಡಾಟದ ವೇಳೆ ಬಿದ್ದು ಪೆಟ್ಟಾಯಿತು.
 ಸಿಲುಕಿದ ಅಂಬುಲೆನ್ಸ್ :
ಜಿಲ್ಲಾ ಕ್ರೀಡಾಂಗಣದಿಂದ ಎಸಿ ಕಚೇರಿ ವರೆಗೆ ಸಾವಿರಾರು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆ ಮಾರ್ಗಮಧ್ಯೆ ರಾಯಣ್ಣ ಸರ್ಕಲ್ ಬಳಿ ಎದುರಾದ ಅಂಬುಲೆನ್ಸ್ ಕೆಲಕಾಲ ಮೆರವಣಿಗೆಯಲ್ಲಿ ಸಿಲುಕಿತು. ಅಂಬುಲೆನ್ಸ್ ಸೈರನ್ ಗಮಿಸಿದ ಪೊಲೀಸರು, ಕಾರ್ಯಕರ್ತರು ತುರ್ತು ವಾಹನಕ್ಕೆ ದಾರಿ ಮಾಡಿಕೊಟ್ಟರು.

One attachment • Scanned by Gmail