ಉಬರಡ್ಕ ರಸ್ತೆ ಬದಿ ಕಸ ಎಸೆಯುತ್ತಿದ್ದ ಪಿಕಪ್‌ಗೆ ತಡೆ

ಸುಳ್ಯ, ನ.೪- ಪಿಕಪ್ ವಾಹನದಲ್ಲಿ ಕಸ ತುಂಬಿ ತಂದು ಅದನ್ನು ಉಬರಡ್ಕದ ಪೂಮಲೆ ರಕ್ಷಿತಾರಣ್ಯದ ಬಳಿ ರಸ್ತೆ ಬದಿಯಲ್ಲಿ ಎಸೆಯುತ್ತಿದ್ದುದನ್ನು ಗಮನಿಸಿದ ಊರವರು ಪಿಕಪ್ ನವರನ್ನು ವಿಚಾರಿಸಿ ಎಚ್ಚರಿಕೆ ನೀಡಿ ರಸ್ತೆ ಬದಿ ಹಾಕಿದ ಕಸವನ್ನು ಪಿಕಪ್‌ಗೆ ತುಂಬಿಸಿ ವಾಪಸ್ ಕಳುಹಿಸಿದ ಘಟನೆ ವರದಿಯಾಗಿದೆ.

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ಬಳಿ ಪೂಮಲೆ ರಕ್ಷಿತಾರಣ್ಯದ ರಸ್ತೆ ಬದಿಯಲ್ಲಿ ಸುಳ್ಯದಿಂದ ತ್ಯಾಜ್ಯ ವಸ್ತುಗಳನ್ನು ಪಿಕಪ್ ವಾಹನದಲ್ಲಿ ತಂದು ಹಾಕುವುದನ್ನು ಕಂಡು ಸ್ಥಳಿಯರಾದ ಅನಿಲ್ ಬಳ್ಳಡ್ಕ, ಜಯಪ್ರಕಾಶ್ ಬೊಮ್ಮಟ್ಟಿ ಯವರು ಸೇರಿ ಪ್ರಶ್ನಿಸಿದರು. ಪಿಕಪ್‌ನಲ್ಲಿದ್ದವರಿಗೆ ಎಚ್ಚರಿಕೆ ನೀಡಿ ಸುರಿದ ಕಸವನ್ನು ತುಂಬಿಸಿ ತೆಗೆದುಕೊಂಡು ಹೋಗುವಂತೆ ಮಾಡಿದರು. ಈ ಪಿಕಪ್ ವಾಹನ ಅಸ್ಮಾಸ್ ಕನ್‌ಸ್ಟ್ರಕ್ಷನ್ ಪ್ರೈ.ಲಿ.ಗೆ ಸೇರಿದ್ದಾಗಿದೆ.

ಗ್ರಾಮದ ಈ ಭಾಗದಲ್ಲಿ ಸುಳ್ಯದಿಂದ ತಂದು ತ್ಯಾಜ್ಯ ವಸ್ತುಗಳನ್ನು ಹಾಕುತ್ತಿದ್ದು, ಇದಕ್ಕೆ ಗ್ರಾಮ ಪಂಚಾಯತ್ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.