ಉಪ-ಸಮರ 3 ಪಕ್ಷಗಳಿಗೆ ಅಗ್ನಿಪರೀಕ್ಷೆ

ಬೆಂಗಳೂರು, ನ. ೨- ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಪರಿಗಣಿಸಲಾಗಿರುವ ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರಿನ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಶಾಂತಿಯುತ ವಾತಾವರಣದಲ್ಲಿ ಮುಕ್ತ ಚುನಾವಣೆಗೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಎರಡು ಕ್ಷೇತ್ರಗಳ ಉಪಚುನಾವಣೆ
ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಿಗೆ ಮಾಡು ಇಲ್ಲವೇ ಮಡಿ ಎಂಬಂತ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಎರಡು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ನಿರ್ಣಾಯಕ ಅಲ್ಲದಿದ್ದರೂ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರಲಿದೆ.

ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಉಪಚುನಾವಣೆ ರಾಜಕೀಯ ಪ್ರತಿಷ್ಠೆ ಪ್ರಶ್ನೆಯಾಗಿದ್ದು ಶತಾಯಗತಾಯ ಈ ಎರಡೂ ಕ್ಷೇತ್ರಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಈಗಾಗಲೇ ಸಾಕಷ್ಟು ಬೆವರು ಸುರಿಸಿದ್ದಾರೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಅವರ ಸಚಿವ ಸಂಪುಟದ ಹಲವಾರು ಸಹೋದ್ಯೋಗಿಗಳು ಮತ್ತು ಮುಖಂಡರು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತದಾರರನ್ನು ಒಲಿಸಿಕೊಳ್ಳಲು ಹರಸಾಹಸ ನಡೆಸಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈ ಎರಡೂ ಕ್ಷೇತ್ರಗಳಲ್ಲಿ ಭೇಟಿ ನೀಡಿ ಶತಾಯಗತಾಯ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.

ಈ ನಡುವೆ ಶಿರಾ ಹಾಗೂ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ನಿನ್ನೆ ತೆರೆಬಿದ್ದಿದೆ. ಆದರೆ ಮೂರು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಮತದಾರ ಪ್ರಭುಗಳ ಮನೆಗಳಿಗೆ ಪ್ರದಕ್ಷಿಣೆ ಹಾಕಿ ಮನ ಒಲಿಸಲು ಶತಪ್ರಯತ್ನ ನಡೆಸಿದ್ದಾರೆ.

ಕ್ಷೇತ್ರಗಳಲ್ಲಿ ನಾಳೆ ಚುನಾವಣೆ ನಡೆಯಲಿದ್ದು ಸುಸೂತ್ರ ಮತದಾನ ನಡೆಯಲು ಚುನಾವಣಾ ಆಯೋಗ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಹೊರಗಿನವರಲ್ಲ ಕ್ಷೇತ್ರ ಬಿಟ್ಟು ಹೇಳುವಂತೆ ಈಗಾಗಲೇ ಆಯೋಗ ಸ್ಪಷ್ಟವಾಗಿ ಸೂಚಿಸಿದೆ.

ಸಾಕಷ್ಟು ಮತಗಟ್ಟೆಗಳನ್ನು ತೆರೆದಿರುವ ಆಯೋಗ ಮತಗಟ್ಟೆಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಆಯೋಗದ ಅಧಿಕಾರಿಗಳು ಎರಡೂ ಕ್ಷೇತ್ರಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.

ಶಿರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಕಣದಲ್ಲಿದ್ದು ಅನುಕಂಪದ ಅಲೆಯಲ್ಲಿ ಗೆದ್ದು ಬರಲು ಎಲ್ಲ ರೀತಿಯ ಕಸರತ್ತು ಮಾಡಿದ್ದಾರೆ.

ಬಿಜೆಪಿಯಿಂದ ರಾಜೇಶ್‌ಗೌಡ ಅವರನ್ನು ಕಣಕ್ಕಿಳಿಸಿದ್ದು ಶಿರಾ ಕ್ಷೇತ್ರವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ತನ್ನತ್ತ ಸೆಳೆದುಕೊಳ್ಳಲು ಪಕ್ಷದ ನಾಯಕರು ಅವಿರತ ಶ್ರಮ ಹಾಕಿದ್ದಾರೆ.

ಕಾಂಗ್ರೆಸ್‌ನ ಟಿಬಿ ಜಯಚಂದ್ರ ಈ ಕ್ಷೇತ್ರವನ್ನು ಈ ಹಿಂದೆ ಪ್ರತಿನಿಧಿಸಿದ್ದು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಇನ್ನೊಂದೆಡೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ ಈ ಹಿಂದೆ ಕಾಂಗ್ರೆಸ್ ತೆಕ್ಕೆಯಲ್ಲಿ ಇತ್ತು. ಕಾಂಗ್ರೆಸ್ನಿಂದ ಗೆದ್ದಿದ್ದ ಮುನಿರತ್ನ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಪಕ್ಷಾಂತರ ಮಾಡಿ ಮರು ಆಯ್ಕೆ ಬಯಸಿದ್ದಾರೆ.

ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದ ಈ ಕ್ಷೇತ್ರವನ್ನು ಪುನಃ ಪಡೆದುಕೊಳ್ಳಲು ಕುಸುಮ ಅವರನ್ನು ಕಣಕ್ಕಿಳಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವಾರು ನಾಯಕರು ಕ್ಷೇತ್ರ ಪ್ರದಕ್ಷಿಣೆ ಮಾಡಿ ಮತದಾರರ ಒಲವು ಗಳಿಸಲು ಪ್ರಯತ್ನಿಸಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ತಮ್ಮ ಇಳಿವಯಸ್ಸಿನಲ್ಲೂ ಸಾಕಷ್ಟು ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಕ್ಷೇತ್ರವನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ಹಲವು ಸುತ್ತು ಪ್ರವಾಸಮಾಡಿ ಮತಯಾಚನೆ ಮಾಡಿದ್ದಾರೆ.

ಶಿರಾ ಕ್ಷೇತ್ರದ ಚುನಾವಣೆ ಮುಗಿಯುವವರೆಗೂ ಇದಕ್ಕೆ ಹೊಂದಿಕೊಂಡಿರುವ ಮಧುಗಿರಿಯಲ್ಲಿ ಮೊಕ್ಕಾಂ ಹೂಡಿರುವ ದೇವೇಗೌಡರು ಕೊನೆಗಳಿಗೆಯಲ್ಲಿ ಮತದಾರರನ್ನು ಹೋಲಿಸಿಕೊಳ್ಳಲು ರೂಪಿಸಬೇಕಾದ ಕಾರ್ಯತಂತ್ರ ಹೆಣೆಯುವಲ್ಲಿ ನಿರತರಾಗಿದ್ದಾರೆ.

ಶಿರಾ ಕ್ಷೇತ್ರದ ಸುತ್ತಮುತ್ತ ಆಂಧ್ರಪ್ರದೇಶ ಹೊಂದಿಕೊಂಡಿರುವುದರಿಂದ ಆಂಧ್ರದ ಗಡಿಭಾಗದಲ್ಲಿ ಪೊಲೀಸರು ಚೆಕ್ಪೋಸ್ಟ್ ಗಳನ್ನು ನಿರ್ಮಿಸಿಕೊಂಡು ಅಕ್ರಮ ಚಟುವಟಿಕೆಗಳಿಗೆ ಆಸ್ಪದ ಇಲ್ಲದಂತೆ ಕಟ್ಟೆಚ್ಚರ ವಹಿಸಿದ್ದಾರೆ.