ಉಪ ಸಮರ: ಹಿಂದೆ ಸರಿದ ಜೆಡಿಎಸ್

ಬೆಂಗಳೂರು, ನ. ೨೨- ಮುಂಬರುವ ಬಸವ ಕಲ್ಯಾಣ ಮತ್ತು ಮಸ್ಕಿ ಕ್ಷೇತ್ರದ ಉಪಚುನಾವಣೆಯಿಂದ ದೂರ ಉಳಿಯಲು ಜೆಡಿಎಸ್ ನಿರ್ಧರಿಸಿದ್ದು, ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವ ತೀರ್ಮಾನವನ್ನು ಜೆಡಿಎಸ್ ಕೈಗೊಂಡಿದೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.
ಈ ಉಪಚುನಾವಣೆಯಲ್ಲಿ ಸ್ಪರ್ಧಿಸದಿರುವ ತೀರ್ಮಾನವನ್ನ ಕೈಗೊಂಡಿದ್ದೇವೆ. ಹಾಗಾಗಿ ಪಕ್ಷದಿಂದ ಈ ಉಪಚುನಾವಣೆಯಲ್ಲಿ ಯಾರೂ ಕಣಕ್ಕಿಳಿಯುವುದಿಲ್ಲ ಎಂದು ಅವರು ತಿಳಿಸಿದರು.
ಕೆಲ ದಿನಗಳ ಹಿಂದೆ ನಡೆದ ಸಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಪರಾಭವಗೊಂಡಿದ್ದು, ರಾಜರಾಜೇಶ್ವರಿ ನಗರದಲ್ಲಂತೂ ಜೆಡಿಎಸ್ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದರು. ಸಿರಾ ಜೆಡಿಎಸ್‌ನ ಭದ್ರಕೋಟೆಯಾಗಿದ್ದರೂ ಅಲ್ಲೂ ಸಹ ಜೆಡಿಎಸ್ ಅಭ್ಯರ್ಥಿ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಈ ಉಪಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸದಿರುವ ತೀರ್ಮಾನವನ್ನು ಜೆಡಿಎಸ್ ಕೈಗೊಂಡಿದೆ ಎಂದು ಹೇಳಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸವ ಕಲ್ಯಾಣ ಕ್ಷೇತ್ರದಿಂದ ಜೆಡಿಎಸ್‌ನಿಂದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಸ್ಪರ್ಧಿಸಿ ೪೦ ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದರು.
ಹಾಗೆಯೇ ಮಸ್ಕಿಯಲ್ಲೂ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿದಿದ್ದರು. ಆದರೆ ಈಗ ಜೆಡಿಎಸ್ ಉಪಚುನಾವಣೆಯಿಂದ ದೂರ ಉಳಿಯುವ ತೀರ್ಮಾನ ಕೈಗೊಂಡಿರುವುದು ರಾಜಕೀಯವಾಗಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.