ಉಪ-ಸಮರ ಸೋಲು-ಗೆಲುವಿನ ಲೆಕ್ಕಚಾರ

Police security infront of the strong room at Jnanakshi Vidhyaniketan School, Halagedevaranahalli RR Nagar

ಬೆಂಗಳೂರು, ನ. ೪- ರಾಜರಾಜೇಶ್ವರಿನಗರ ಮತ್ತು ಸಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಮುಗಿಯುತ್ತಿದ್ದಂತೆಯೇ ಸೋಲು ಗೆಲುವಿನ ಲೆಕ್ಕಾಚಾರ ನಡೆದಿದೆ. ಸೋಲು- ಗೆಲುವಿನ ಬಗ್ಗೆ , ಬೆಟ್ಟಿಂಗ್ ಜೋರಾಗಿ ನಡೆದಿದೆ.
ಆರ್ ಆರ್ ನಗರ ಮತ್ತು ಸಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ನಿನ್ನೆ ಮತದಾನ ಮುಗಿಯುತ್ತಿದ್ದಂತೆಯೇ ಯಾರು ಗೆಲ್ಲಬಹುದು ಎಂಬ ಲೆಕ್ಕಾಚಾರ ಜೋರಾಗಿವೆ.
ಎರಡೂ ಕ್ಷೇತ್ರಗಳಲ್ಲೂ ನಡೆದಿರುವ ಶೇಕಡವಾರು ಮತದಾನದ ಆಧಾರದ ಮೇಲೆ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ನಡೆದಿದೆ.
ಸಿರಾ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾ ನಡುವೆಯೂ ದಾಖಲೆಯೆಂಬಂತೆ ಶೇ. ೮೪.೫೪ ರಷ್ಟು ಮತದಾನವಾಗಿದ್ದು, ರಾಜರಾಜೇಶ್ವರಿನಗರದಲ್ಲಿ ಶೇ. ೪೫.೨೪ ರಷ್ಟು ಮತದಾನ ನಡೆದಿದೆ.
ಸಿರಾದಲ್ಲಿ ಬಿಜೆಪಿಯ ಡಾ.ರಾಜೇಶ್‌ಗೌಡ, ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ ಹಾಗೂ ಜೆಡಿಎಸ್‌ನ ಅಮ್ಮಾಜಮ್ಮ ಸೇರಿದಂತೆ ೧೫ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಕೈ ಮತದಾರ ಮುದ್ರೆ ಒತ್ತಿದ್ದು ಈಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಹಾಗೆಯೇ ಆರ್ ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ, ಕಾಂಗ್ರೆಸ್‌ನ ಹೆಚ್. ಕುಸುಮಾ, ಜೆಡಿಎಸ್‌ನ ಕೃಷ್ಣಮೂರ್ತಿ ಸೇರಿದಂತೆ ೧೬ ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ನಿನ್ನೆ ಮತದಾರರು ಮುದ್ರೆ ಒತ್ತಿದ್ದಾರೆ.
ಸಿರಾದಲ್ಲಿ ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿರುವುದು ಈವರೆಗಿನ ಗೆಲುವಿನ ಲೆಕ್ಕಾಚಾರವನ್ನೇ ಬದಲಾಯಿಸುವ ಸಾಧ್ಯತೆಗಳಿದ್ದು, ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಎಂಬುದು ಕುತೂಹಲ ಮೂಡಿಸಿದೆ.
ಹಾಗೆಯೇ ಆರ್ ಆರ್ ನಗರದಲ್ಲಿ ನಿರೀಕ್ಷೆಗಿಂತ ಕಡಿಮೆ ಮತದಾನವಾಗಿದೆ. ಇಲ್ಲೂ ಗೆಲುವು ಯಾರಿಗೆ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರತಿ ಮತಗಟ್ಟೆಯಲ್ಲಿ ನಡೆದಿರುವ ಮತದಾನದ ಪ್ರಮಾಣದ ಮೇಲೆ ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದು, ಗೆಲುವು ತಮ್ಮದೆ ಎಂಬ ವಿಶ್ವಾಸದಲ್ಲಿ ಇದ್ದಾರೆ.
ಈ ಎರಡೂ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನ. ೧೦ ರಂದು ನಡೆದ ಫಲಿತಾಂಶ ಹೊರಬೀಳಲಿದೆ. ಪ್ರಕಟವಾಗಲಿದೆ.
ಮತಯಂತ್ರಗಳ ಕೊಠಡಿಗೆ ಬಿಗಿ ಭದ್ರತೆ
ಉಪಚುನಾವಣೆ ನಡೆದ ನಂತರ ಮತ ಯಂತ್ರಗಳನ್ನು ಬಿಗಿ ಭದ್ರತೆಯ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದೆ.
ಸಿರಾದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಯಂತ್ರಗಳನ್ನು ತುಮಕೂರಿನ ಬಿಹೆಚ್ ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ೨ ಕೊಠಡಿಗಳಲ್ಲಿ ಬಿಗಿ ಭದ್ರತೆಯಲ್ಲಿ ಇಡಲಾಗಿದೆ.
ಮತ ಯಂತ್ರಗಳಿರುವ ಈ ಎರಡೂ ಭದ್ರತಾ ಕೊಠಡಿಗಳಿಗೆ ಹೆಚ್ಚಿನ ಬಿಗಿ ಭದ್ರತೆ ಒದಗಿಸಲಾಗಿದ್ದು, ಭದ್ರತಾ ಕಾರ್ಯಕ್ಕಾಗಿ ಸಿಆರ್‌ಪಿಎಫ್ ತುಕ್ಕಡಿ, ಪ್ಯಾರಾಮಿಲಟರಿ ಪಡೆ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.
ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತಯಂತ್ರಗಳನ್ನು ರಾಜರಾಜೇಶ್ವರಿನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿನ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದ್ದು, ಇಲ್ಲೂ ೧೫೦ ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹಾಗೆಯೇ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.