ಉಪ-ಸಮರ; ಬಿಜೆಪಿ ಗೆಲುವು

ಹುಬ್ಬಳ್ಳಿ, ಮಾ ೩೦: ರಾಜ್ಯದ ಮೂರೂ ಉಪುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಂಘಟನೆಯನ್ನು ನೋಡಿ ಕಾಂಗ್ರೆಸ್, ಜೆಡಿಎಸ್‌ಗೆ ದಿಕ್ಕು ತೋಚುತ್ತಿಲ್ಲ. ಕಳೆದ ಬಾರಿಯ ಉಪ ಚುನಾವಣೆಯಲ್ಲಿಯೂ ನಾವು ಗೆದ್ದಿದ್ದೇವೆ. ಈ ಉಪಚುನಾವಣೆಯಲ್ಲಿಯೂ ಗೆಲ್ಲುತ್ತೇವೆ ಎಂದರು.
ಸಿಡಿ ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು ಮೌನವಹಿಸಿದ್ದಾರೆ. ಈ ಬಗ್ಗೆ ಅವರು ಏನೂ ಮಾತನಾಡುತ್ತಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ಸಿದ್ದರಾಮಯ್ಯ ಅವರು ಯಾವಾಗಲು ದ್ವಂದ್ವ ಹೇಳಿಕೆಗಳನ್ನು ನೀಡುತ್ತಾರೆ. ಮೊದಲು ಅವರು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದರು. ಎರಡೆರಡು ಕಡೆಗಳಲ್ಲಿ ನಿಂತರು. ಏಕೆಂದರೆ ಅವರಿಗೆ ಸೋಲುತ್ತೇನೆಂಬ ಭಯವಿತ್ತು. ಈಗಲೂ ಮುಖ್ಯಮಂತ್ರಿ ನಾನೇ. ಮುಂದೆಯೂ ನಾನೇ ಎಂದು ಹೇಳುತ್ತಾರೆ. ಮತ್ತೇ ಬಾದಾಮಿ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಅವರು ಬಾದಾಮಿಯಲ್ಲಿ ನಿಲ್ಲೋದಿಲ್ಲ. ನಿಂತರೆ ಅವರಿಗೆ ಸೋಲು ಸಿದ್ಧ. ಹೀಗೆ ದಿನಕ್ಕೊಂದು ಹೇಳಿಕೆಗಳನ್ನು ಅವರು ಕೊಡುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದರು.
ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿಡಿ ವಿಚಾರವಾಗಿ ನಾನು ಏನೂ ಮಾತನಾಡುವುದಿಲ್ಲ. ಸಿಡಿ ವಿಚಾರ ಬಿಟ್ಟು ಏನಾದರೂ ಬೇರೆ ವಿಚಾರವಾಗಿ ಕೇಳಿ ನಾನು ಉತ್ತರಿಸುತ್ತೇನೆ ಎಂದು ಸಚಿವ ಈಶ್ವರಪ್ಪ ನುಡಿದರು.