ಉಪ-ಸಮರ ಅಭ್ಯರ್ಥಿ ಆಯ್ಕೆ ಬಿಜೆಪಿಗೆ ಕಗ್ಗಂಟು

ಬೆಂಗಳೂರು, ಮಾ. ೨೫- ರಾಜ್ಯದಲ್ಲಿ ಉಪಚುನಾವಣೆ ಕಾವು ಏರುತ್ತಿದ್ದರೊ ಆಡಳಿತರೂಢಾ ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆ ತಲೆನೋವು ತಂದಿದೆ. ಕಾಂಗ್ರೆಸ್ ಪಕ್ಷ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದ್ದರೂ ಬಿಜೆಪಿಗೆ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ.
ವಿರೋಧ ಪಕ್ಷವಾದ ಕಾಂಗ್ರೆಸ್ ಈಗಾಗಲೇ ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಸತೀಶ್‌ಜಾರಕಿಹೊಳಿ ಅಭ್ಯರ್ಥಿಯಾಗುವುದು ನಿಶ್ಚಿತವಾಗಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿ ಉಳಿದಿದೆ.
ಇಷ್ಟಾದರೂ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಗೆ ಹಲವು ಎಡರು-ತೊಡರುಗಳು ಎದುರಾಗಿವೆ. ಉಪಚುನಾವಣೆಯ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿರುವುದರಿಂದ ಅಭ್ಯರ್ಥಿಗಳ ಆಯ್ಕೆ ತಲೆ ನೋವು ತಂದಿದೆ. ಭಿನ್ನಮತ, ಬಂಡಾಯಕ್ಕೆ ಅವಕಾಶವಾಗದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಸರತ್ತು ಬಿಜೆಪಿಯಲ್ಲಿ ನಡೆದಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ನೇತೃತ್ವದಲ್ಲಿ ಕಳೆದ ವಾರ ನಡೆದಿದ್ದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಭಾವನೀಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್ ಅನುಮೋದನೆಗೆ ಕಳುಹಿಸುವ ಜವಾಬ್ದಾರಿಯನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ವಹಿಸಲಾಗಿತ್ತು. ಅದರಂತೆ ಕಟೀಲ್ ಅವರು ನಿನ್ನೆ ರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚ ರ್ಚೆ ನಡೆಸಿದರು
ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಬಿಜೆಪಿ ನಾಯಕರಿಗೆ ಸಮಸ್ಯೆ ತಂದಿದೆ. ಇಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನಕೂಬಾ, ಮಾಜಿ ಸಚಿವ ಗುರಪಾದಪ್ಪನಾಗಮಾರಪಲ್ಲಿ ಅವರ ಪುತ್ರ ಸೂರ್ಯಕಾಂತ ನಾಗಮಾರಪಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
ಮಸ್ಕಿ ಕ್ಷೇತ್ರದಿಂದ ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ಅಭ್ಯರ್ಥಿಯಾಗುವುದು ನಿಶ್ಚಿತ.
ಬದಲಾದ ಲೆಕ್ಕಾಚಾರ
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ದಿ. ಸುರೇಶ್ ಅಂಗಡಿ ಅವರ ಪುತ್ರಿ ಇಲ್ಲವೆ ಸಚಿವ ಜಗದೀಶ್‌ಶೆಟ್ಟರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ನಡೆದಿತ್ತು. ಕಾಂಗ್ರೆಸ್‌ನಿಂದ ಮಾಜಿ ಸಚಿವ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಕಣಕ್ಕಿಳಿಯುವುದು ನಿಶ್ಚಿತವಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ರಾಜಕೀಯ ಲೆಕ್ಕಾಚಾರಗಳು ಬದಲಾಗಿದ್ದು, ಸತೀಶ್ ಜಾರಕಿಹೊಳಿ ಅವರಿಗೆ ಪ್ರಬಲ ಪೈಪೋಟಿ ನೀಡಲು ಶ್ರದ್ಧಾ ಶೆಟ್ಟರ್, ಬದಲು ಬೇರೆಯವರನ್ನೇ ಅಭ್ಯರ್ಥಿಯನ್ನಾಗಿಸುವ ಚರ್ಚೆಗಳು ನಡೆದಿವೆ.
ಸ್ಥಳೀಯವಾಗಿ ಪ್ರಬಲವಾಗಿರುವ ಆರ್‌ಎಸ್‌ಎಸ್‌ನ ಕಟ್ಟಾ ಬೆಂಬಲಿಗರಾದ ಗಿರೀಶ್ ಸೋನುವಾಲ್ಕರ್ ಇಲ್ಲವೆ ಡಾ. ರವಿಪಾಟೀಲ್ ಹೆಸರು ಈಗ ಮುಂಚೂಣಿಗೆ ಬಂದಿದೆ. ಈ ಇಬ್ಬರೂ ಈಗಾಗಲೇ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಟಿಕೆಟ್‌ಗೆ ಮನವಿ ಮಾಡಿದ್ದಾರೆ. ಇದರ ಜತೆಗೆ ಸಚಿವ ಉಮೇಶ್‌ಕತ್ತಿ ತಮ್ಮ ಸಹೋದರ ರಮೇಶ್ ಕತ್ತಿ ಅವರಿಗೂ ಟಿಕೆಟ್ ಕೊಡಿಸಲು ದೆಹಲಿಯಲ್ಲಿ ಲಾಬಿ ನಡೆಸಿದ್ದಾರೆ.
ಇನ್ನೆರಡು ಮೂರು ದಿನಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ. ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ನಡೆದಿದ್ದು, ಈ ತಿಂಗಳ ೩೦ ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದೆ.