ಉಪ-ಸಮರ ಅಭ್ಯರ್ಥಿಗಳ ಭವಿಷ್ಯಕ್ಕೆ ಮತದಾರರ ಮುದ್ರೆ

ಬೆಂಗಳೂರು, ಏ. ೧೭- ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿರುವ ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಬಿರುಸಿನ ಮತದಾನ ನಡೆದಿದ್ದು, ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಉಳಿದಂತೆ ಮತದಾನ ಶಾಂತಿಯುತವಾಗಿ ಸಾಗಿದೆ.
ಈ ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಮತದಾರ ಇಂದು ಮುದ್ರೆ ಒತ್ತಿದ್ದು, ಮೇ ೨ ರಂದು ನಡೆಯುವ ಮತ ಎಣಿಕೆಯಲ್ಲಿ ಮತದಾರರ ತೀರ್ಪು ಏನೆಂಬುದು ಬಹಿರಂಗವಾಗಲಿದೆ.
ಇಂದು ಬೆಳಿಗ್ಗೆ ೭ ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಮೂರು ಕ್ಷೇತ್ರಗಳಲ್ಲೂ ಮತದಾರರು ಉತ್ಸಾಹದಿಂದ ಬಂದು ಮತ ಹಾಕುತ್ತಿದ್ದು, ಮತದಾನ ಚುರುಕಾಗಿ ಸಾಗಿದೆ.
ಮೂರು ಕ್ಷೇತ್ರಗಳಲ್ಲೂ ಮತದಾನ ಶಾಂತಿಯುತವಾಗಿ ನಡೆದಿದ್ದು, ರಾಮದುರ್ಗ ತಾಲ್ಲೂಕಿನ ಕೆಲವು ಮತಗಟ್ಟೆಗಳಲ್ಲಿ ಮತದಾನ ಬಹಿಷ್ಕರಿಸಲಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನದ ವೇಳೆಗೆ ಶೇ. ೪೦ ರಷ್ಟು, ಬಸವಕಲ್ಯಾಣದಲ್ಲಿ ಶೇ. ೪೨ ರಷ್ಟು ಹಾಗೂ ಮಸ್ಕಿಯಲ್ಲಿ ಶೇ. ೪೫ ರಷ್ಟು ಮತದಾನ ಆಗಿದೆ.
ಈ ಕೆಲವು ಮತಗಟ್ಟೆಗಳಲ್ಲಿ ಜನ ಸರತಿ ಸಾಲಿನಲ್ಲಿ ನಿಂತು ಮತ ಹಾಕುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಮತದಾನ ನಡೆದಿರುವ ಮೂರು ಕ್ಷೇತ್ರಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಮತಗಟ್ಟೆಗೆ ಆಗಮಿಸಿ ಮತ ಹಾಕಿದರು.
ಮತದಾರರನ್ನು ಮತದಾನ ಕೇಂದ್ರಕ್ಕೆ ಕರೆತಂದು ಮತ ಹಾಕಿಸುವ ಕೊನೆ ಘಳಿಗೆಯ ಕಸರತ್ತನ್ನು ಅಭ್ಯರ್ಥಿಗಳ ಬೆಂಬಲಿಗರು ನಡೆಸಿದ್ದಾರೆ.
ಹಲವು ಹಳ್ಳಿಗಳಲ್ಲಿ ಹಿರಿಯ ನಾಗರಿಕರು ಉತ್ಸಾಹದಿಂದ ಮತ ಹಾಕಿದ್ದು ಗಮನ ಸೆಳೆಯಿತು. ಮತದಾನ ಸಂದರ್ಭದಲ್ಲಿ ಮತದಾರರ ಪಟ್ಟಿಯ ಗೊಂದಲಗಳು ಕೆಲವೆಡೆ, ಮಾತಿನ ಚಕಮಕಿಗೂ ಕಾರಣವಾಯಿತಾದರೂ ಮತದಾನಕ್ಕೆ ಯಾವುದೇ ಭಂಗ ಆಗಿಲ್ಲ. ಮೂರೂ ಕ್ಷೇತ್ರಗಳ ಕೆಲ ಮತಗಟ್ಟೆಗಳಲ್ಲಿ ಮಹಿಳೆಯರಿಗಾಗಿ ವಿಶೇಷ ರೀತಿಯಲ್ಲಿ ಮತಗಟ್ಟೆಗಳನ್ನು ಅಲಂಕರಿಸಿ ಪಿಂಕ್ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಸೆಲ್ಫಿ ಗೆತೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಮತದಾನ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ಚುನಾವಣಾ ಆಯೋಗ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದು, ಬಿಗಿ ಬಂದೋಬಸ್ತ್ ನಡುವೆ ಮತದಾನ ನಡೆದಿದೆ.
ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ಕೋವಿಡ್‌ನಿಂದ ಮೃತಪಟ್ಟಿದ್ದರಿಂದ ತೆರವಾದ ಸ್ಥಾನಕ್ಕೆ ಈ ಉಪಚುನಾನಣೆ ನಡೆಯುತ್ತಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಬಿಜೆಪಿ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್‌ನಿಂದ ಸತೀಶ್ ಜಾರಕಿಹೊಳಿ ಕಣದಲ್ಲಿದ್ದು, ಒಟ್ಟು ೧೦ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಮಸ್ಕಿಯಲ್ಲಿ ಬಿಜೆಪಿಯ ಪ್ರತಾಪ್‌ಗೌಡ ಪಾಟೀಲ್ ಮತ್ತು ಕಾಂಗ್ರೆಸ್‌ನ ಬಸನಗೌಡ ತುರುವಿಹಾಳ ನಡುವೆ ಪೈಪೋಟಿ ಇದ್ದು, ಒಟ್ಟು ೮ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಸವಕಲ್ಯಾಣದಲ್ಲಿ ಬಿಜೆಪಿಗೆ ಬಂಡಾಯ ಎದುರಾಗಿದ್ದು, ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕ ಮಲ್ಲಿಕಾರ್ಜುನಖೂಬಾ ಕಣದಲ್ಲಿದ್ದು, ಬಿಜೆಪಿಯಿಂದ ಶರಣಸಲಗಾರ, ಕಾಂಗ್ರೆಸ್‌ನಿಂದ ದಿ. ನಾರಾಯಣರಾವ್ ರವರ ಪತ್ನಿ ಮಾಲಾ ನಾರಾಯಣರಾವ್ ಮತ್ತು ಜೆಡಿಎಸ್‌ನಿಂದ ಸೈಯದ್ ಎಸರಬ್ ಅಲಿ ಖಾದ್ರಿ ಸೇರಿದಂತೆ ಒಟ್ಟು ೧೨ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಸವಕಲ್ಯಾಣ ಕ್ಷೇತ್ರದ ಶಾಸಕರಾಗಿದ್ದ ನಾರಾಯಣರಾವ್ ಅವರು ಕೋವಿಡ್‌ಗೆ ಬಲಿಯಾದ ಕಾರಣ ಇಲ್ಲಿ ಉಪಚುನಾವಣೆ ನಡೆದಿದೆ.
ಗಣ್ಯರ ಮತದಾನ
ಮೂರು ಕ್ಷೇತ್ರಗಳಲ್ಲೂ ಹಲವು ಗಣ್ಯರು ಮತದಾನ ಮಾಡಿದ್ದು, ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಂಗಳಾ ಅಂಗಡಿ ಇಂದು ಬೆಳಗ್ಗೆಯೇ ಮತ ಹಾಕಿದರು. ಹಾಗೆಯೇ ಹಲವು ಶಾಸಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಮತದಾನ ಮಾಡಿದ್ದಾರೆ.
ಮಾಜಿ ಸಚಿವ ಜಾರಕಿಹೊಳಿ ಅವರ ಪುತ್ರ ಮತ್ತು ಆವರ ಪತ್ನಿ ಅಂಬಿಕಾ ಅವರು ಗೋಕಾಕ್‌ನಲ್ಲಿ ಮತ ಹಾಕಿದರು.
ರಮೇಶ್ ಜಾರಕಿಹೊಳಿ ಅವರು ಕೊರೊನಾ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರು ೨ ದಿನಗಳ ಹಿಂದೆಯೇ ಅಂಚೆ ಮೂಲಕ ಮತದಾನ ಮಾಡಿದ್ದಾರೆ ಎನ್ನಲಾಗಿದೆ.
ಉಳಿವಿ ಪೀಠದ ಪೂಜ್ಯರಾದ ಶಿವಪ್ರಕಾಶ ಸ್ವಾಮೀಜಿ, ಬೈಲಮಂಗಲದಲ್ಲಿ ಮತ ಹಾಕಿದ್ದು, ವಿಧಾನಸಭೆಯ ಉಪಾಧ್ಯಕ್ಷ ಆನಂದ ಮಾಮನಿ ಸವದತ್ತಿಯಲ್ಲಿ ಮತ ಹಾಕಿದರು. ಇವರ ಪತ್ನಿ ಕೊರೊನಾ ಕಾರಣದಿಂದ ಹೋಂ ಕ್ವಾರಂಟೈನ್‌ನಲ್ಲಿದ್ದು ಇವರು ಸಖಿ ಬೂತ್‌ನಲ್ಲಿ ಪ್ರತ್ಯೇಕವಾಗಿ ಮತ ಚಲಾಯಿಸಿದರು.
ಬಸವ ಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ, ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ, ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್, ಜೆಡಿಎಸ್ ಅಭ್ಯರ್ಥಿ ಸೈಯದ್ ಖಾದ್ರಿ ಸಹ ಮತ ಹಾಕಿದರು.
ಮಸ್ಕಿಯ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಕೊರೊನಾ ಕಾರಣದಿಂದ ಹೋಂ ಕ್ವಾರಂಟೈನ್‌ನಲ್ಲಿದ್ದು, ಪ್ರತ್ಯೇಕವಾಗಿ ಅವರು ಮತ ಹಾಕಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಅವರು ಮತ ಹಾಕಿದ್ದು, ಮತ ಚಲಾವಣೆಗೂ ಮುನ್ನ ಬಸನಗೌಡ ಪಾಟೀಲ್ ಮತ್ತು ಪ್ರತಾಪ್‌ಗೌಡ ಪಾಟೀಲ್ ಮಕ್ಕಳು, ಸೊಸೆಯಂದಿರು ಮತ್ತು ಕುಟುಂಬಸ್ಥರು ದೇವಾಲಯಕ್ಕೆ ಭೇಟಿ ನೀಡಿ ನಂತರ ಮತ ಹಾಕಿದ್ದು, ಗಮನ ಸೆಳೆಯಿತು.
ಈ ಮೂರು ಕ್ಷೇತ್ರಗಳ ಮತ ಎಣಿಕೆ ಮೇ ೨ ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.