ಉಪ ವಿಭಾಗ ಆಸ್ಪತ್ರೆಗೆ ಶಾಸಕ ದಢೇಸೂಗೂರು ಭೇಟಿ

ಗಂಗಾವತಿ ಮೇ 02 :ಕೊರೋನಾದಂತಹ ಮಾಹಾ ಮಾರಿ ರೋಗದಿಂದ ಜನರು ಆತಂಕಗೊಳ್ಳಬಾರದು. ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಸೇರಿದಂತೆ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರ ಆರೋಗ್ಯಕ್ಕೆ ವೈದ್ಯರು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಕೊವಿಡ್‌ನಿಂದ ಚಿಕಿತ್ಸೆ ಪಡೆಯುತ್ತಿರುವಾಗ ಯಾರು ಧೈರ್ಯಗೆಡಬಾರದು. ಆತ್ಮವಿಶ್ವಾಸವಿದ್ದರೆ ಎಲ್ಲವನ್ನು ಗೆದ್ದು ಬರುತ್ತೇವೆ. ಆಸ್ಪತ್ರೆಗೆ ಹೋಗುತ್ತಿದ್ದಂತೆ ಟಿವಿ, ಮೋಬೈಲ್ ಮೂಲಕ ಬರುವ ಹಲವು ವಿಷಮ ಸ್ಥಿತಿಯ ದೃಶ್ಯಗಳನ್ನು ನೋಡಿ ಕಂಗಾಗಲಾಗಬೇಡಿ. ಎಲ್ಲರೂ ಸೇರಿ ಬಂದಿರುವ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸೋಣ ಎಂದು ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಜನತೆಗೆ ಕರೆ ನೀಡಿದರು.
ಕಾರಟಗಿ, ಶ್ರೀರಾಮನಗರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ನಂತರ ನಗರದ ಸಾರ್ವಜನಿಕ ಉಪ ವಿಭಾಗ ಆಸ್ಪತ್ರೆಗೆ ಆಗಮಿಸಿ ಡಿಹೆಚ್‌ಓ ಡಾ.ಲಿಂಗರಾಜ, ಆಡಳಿತ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಅವರಿಂದ ಸಧ್ಯದ ಕೊವಿಡ್ ಪರಿಸ್ಥಿತಿಯ ವರದಿ ಪಡೆದು ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೊರೋನಾ ರೋಗದಿಂದ ಜನ ಜೀವನಕ್ಕೆ ತೊಂದರೆಯಾಗುತ್ತಿದೆ. ಆದರೆ ಜನರ ಆರೋಗ್ಯ ರಕ್ಷಣೆಗಾಗಿ ಸರಕಾರ ಲಾಕ್‌ಡೌನ್‌ನಂತಹ ಕ್ರಮ ಕೈಗೊಂಡಿದೆ. ರೋಗ ನಿಯಂತ್ರಣಕ್ಕೆ ಈ ಕ್ರಮ ಕೈಗೊಂಡಿರುವ ಸರಕಾರ ಎಲ್ಲಾ ಆಸ್ಪತ್ರೆಗಳಲ್ಲಿ ಅತ್ಯುತ್ತುಮ ವೈದ್ಯಕೀಯ ಸೇವೆ ನೀಡುವಂತೆ ಎಲ್ಲಾ ಸೌಲಭ್ಯ ಒದಗಿಸುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಕೊವಿಡ್ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ವೈದ್ಯರು ಪ್ರಮಾಣಿಕವಾಗಿ ಒದಗಿಸುತ್ತಿದ್ದಾರೆ. ಕೊರೋನಾ ಪಾಜಿಟಿವ್ ಬಂದವರನ್ನು ಪ್ರತ್ಯೇಕವಾಗಿ ಇಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನಾಕ್ಕೆ ಬಹಳಷ್ಟು ಜನ ಹೆದರಿ ಜೀವ ಬಿಡುತ್ತಿದ್ದಾರೆ. ಇದು ಸಾಮಾನ್ಯ ಖಾಯಲಿ ಎಂದು ಆತ್ಮ ವಿಶ್ವಾಸದಿಂದ ರೋಗಿಗಳು ಚಿಕಿತ್ಸೆ ಪಡೆಯಬೇಕು. ಕನಕಗಿರಿ ಮತ್ತು ಕಾರಟಗಿ ತಾಲೂಕಿನವರಿಗೂ ಉಪ ವಿಭಾಗ ಆಸ್ಪತ್ರೆಯಲ್ಲೆ ಚಿಕಿತ್ಸೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ಇಂದು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದೇನೆ. ಆಕ್ಸಿಜನ್, ಔಷಧಿ ಮುಂತಾದ ಯಾವುದೇ ಸಮಸ್ಯೆ ಇಲ್ಲಿ ಇಲ್ಲ. ಸೂಕ್ತವಾದ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ಗುಣಮಟ್ಟದ ಊಟ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿಹೆಚ್‌ಓ ಡಾ.ಲಿಂಗರಾಜ, ವೈದ್ಯಾಧಿಕಾರಿ ಡಾ.ಈಶ್ವರ ಸವಡಿ, ತಾಪಂ ಇಓ ಡಾ. ಮೋಹನ್, ಕಾರಟಗಿ ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ, ಜಿಪಂ ಮಾಜಿ ಸದಸ್ಯ ವಿರೇಶ ಸಾಲೋಣಿ, ಯುವ ಮುಖಂಡ ರುದ್ರಗೌಡ ನಂದಿಹಳ್ಳಿ ಇದ್ದರು.