ಉಪ ವಿಭಾಗಾಧಿಕಾರಿ ಪ್ರಸನ್ನಗೆ ಬೈಕ್ ಡಿಕ್ಕಿ: ಬೆಂಗಳೂರು ಆಸ್ಪತ್ರೆಗೆ ದಾಖಲು

ಚಿತ್ರದುರ್ಗ,ಮೇ.3: ವಾಯು ವಿಹಾರಕ್ಕೆ ತೆರಳಿದ್ದ ಚಿತ್ರದುರ್ಗದ ಉಪವಿಭಾಗಾಧಿಕಾರಿ ಪ್ರಸನ್ನ ಅವರಿಗೆ ಬೈಕ್ ಡಿಕ್ಕಿ ಹೊಡೆದು ಪರಿಣಾಮ ಗಂಭೀರ ಗಾಯಗೊಂಡಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ನಗರದ ಗೋನೂರು ರಸ್ತೆಯಲ್ಲಿ ಮುಂಜಾನೆ 6 ಗಂಟೆ ಸುಮಾರಿನಲ್ಲಿ ಎಂದಿನಂತೆ ಎಸಿ ಪ್ರಸನ್ನ ಅವರು ವಾಯುವಿಹಾರಕ್ಕೆ ತೆರಳಿದ್ದಾರೆ. ಈ ವೇಳೆ ಅಪರಿಚಿತ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ  ಪರಿಣಾಮ ಪ್ರಸನ್ನ ಅವರ ಕಾಲು ಮತ್ತು ತಲೆಗೆ ತೀವ್ರ ಪೆಟ್ಟಾಗಿದೆ.
ಕೂಡಲೇ ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಿದ ವೈದ್ಯರ ತಂಡ ಪರಿಸ್ಥಿತಿಯನ್ನು ಅವಲೋಕಿಸಿ ಗಾಯ ಗಂಭೀರ ಸ್ವರೂಪವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಸವೇಶ್ವರ ಆಸ್ಪತ್ರೆ ಡಾ.ಫಾಲಾಕ್ಷ ಅವರು ತಿಳಿಸಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ