ಉಪ-ರಾಷ್ಟ್ರಪತಿ ಚುನಾವಣೆಗೆ ಮತದಾನ ಜಗದೀಪ್ ಆಯ್ಕೆ ಖಚಿತ


ನವದೆಹಲಿ,ಆ.೬- ಉಪರಾಷ್ಟ್ರಪತಿ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಸೇರಿದಂತೆ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರುಗಳು ಮತ ಚಲಾಯಿಸಿದರು.
ಸಂಸತ್ ಭವನದಲ್ಲಿ ಉಪರಾಷ್ಟ್ರಪತಿ ಚುನಾವಣೆಯ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಬೆಳಿಗ್ಗೆ ೧೦ ಗಂಟೆಗೆ ಮತದಾನ ಆರಂಭವಾಯಿತು. ಸಂಜೆ ೫ರವರೆಗೂ ಮತದಾನಕ್ಕೆ ಅವಕಾಶವಿದೆ. ಇಂದು ಮತದಾನ ಆರಂಭವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರಮೋದಿ ಅವರು ಮತ ಚಲಾಯಿಸಿದರು. ಹಾಗೆಯೇ ಕೇಂದ್ರ ಸಚಿವ ಅಮಿತ್ ಶಾ ಸಹ ಪ್ರಧಾನಿ ಮತ ಚಲಾಯಿಸಿದ ನಂತರ ಮತ ಹಾಕಿದರು.
ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ರವರು ವ್ಹೀಲ್‌ಚೇರ್‌ನಲ್ಲಿ ಆಗಮಿಸಿ ತಮ್ಮ ಮತ ಚಲಾಯಿಸಿದರು. ರಾಜ್ಯಸಭೆ ಹಾಗೂ ಲೋಕಸಭೆಯ ಸದಸ್ಯರುಗಳು ಈ ಚುನಾವಣೆಗೆ ಮತದಾರರಾಗಿದ್ದು, ಒಬ್ಬೊಬ್ಬರೇ ಬಂದು ಮತಗಳನ್ನು ಹಾಕಿದರು.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನ್‌ಕರ್ ಮತ್ತು ಯುಪಿಎ ಅಭ್ಯರ್ಥಿ ಮಾರ್ಗರೇಟ್ ಆಳ್ವ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಎನ್‌ಡಿಎ ಒಕ್ಕೂಟಕ್ಕೆ ಬಹುಮತ ಇರುವುದರಿಂದ ಜಗದೀಪ್ ಧನ್‌ಕರ್ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಾರ್ಗರೇಟ್ ಆಳ್ವ ಅವರನ್ನು ಟಿಆರ್‌ಎಸ್, ಜೆಎಂಎಂ, ಆಮ್‌ಆದ್ಮಿ ಪಕ್ಷ, ಎಐಎಂಐಎಂ ಪಕ್ಷಗಳು ಬೆಂಬಲಿಸಿವೆ. ತೃಣಮೂಲ ಕಾಂಗ್ರೆಸ್ ಮತದಾನದಿಂದ ದೂರ ಉಳಿದಿದೆ.
ಎನ್‌ಡಿಎ ಅಭ್ಯರ್ಥಿಯನ್ನು ಬಿಜೆಪಿ, ಜೆಡಿಯು, ವೈಎಸ್‌ಆರ್ ಕಾಂಗ್ರೆಸ್, ಬಿಎಸ್ಪಿ, ಎಐಎಡಿಎಂಕೆ, ಶಿವಸೇನೆ ಪಕ್ಷಗಳು ಬೆಂಬಲಿಸಿವೆ.