ಉಪ ಚುನಾವಣೆ 2014
 ಬಿಜೆಪಿಯ ಭದ್ರಕೋಟೆ ಛಿದ್ರ, ಕಾಂಗ್ರೆಸ್ ಗೆ ಮೊದಲ ಗೆಲುವು


* 5 ಜನ ಸ್ಪರ್ಧಾ ಕಣದಲ್ಲಿ
* ಎನ್.ವೈ.ಗೋಪಾಲಕೃಷ್ಣ ಆಯ್ಕೆ
* ಫಲಿಸಿದ  ಡಿಕೆಶಿ ತಂತ್ರ
* ಬಿಜೆಪಿಗೆ ಹಣಕಾಸಿನ ಮುಗ್ಗಟ್ಟು
* ಕಾಂಗ್ರೆಸ್ ನ ದಂಡೆಯಾತ್ರೆ
* ಶ್ರೀರಾಮುಲು ಶಿಷ್ಯನಿಗೆ ಸೋಲು
* ಕ್ಷೇತ್ರದಲ್ಲಿ ಹಿಡಿತ ಕಳೆದುಕೊಂಡ ಶ್ರೀರಾಮುಲು
ಎನ್. ವೀರಭದ್ರಗೌಡ

ಬಳ್ಳಾರಿ, ಮಾ.19: ರಾಜ್ಯದಲ್ಲಿ ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಕಟ್ಟಿ 2013 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ  ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಬಿ.ಶ್ರೀರಾಮುಲು. 2014 ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆಗೆ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸಂಸದರಾಗುತ್ತಾರೆ. ಇದರಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರದಲ್ಲಿ ಎರೆಡನೇ ಬಾರಿಗೆ ಉಪ ಚುನಾವಣೆ
2014  ಅಗಷ್ಟ 21 ರಂದು ನಡೆದು ಬಿಜೆಪಿಯ ಭದ್ರಕೋಟೆ ಛಿದ್ರಗೊಂಡು ಕಾಂಗ್ರೆಸ್ ಅಧಿಪತ್ಯ ಸಾಧಿಸುತ್ತದೆ.
ಅಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಸಿದ್ದರಾಮಯ್ಯ ಅವರ ಸಂಪುಟದ ಸಚಿವರಾದ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡುರಾವ್, ಕೃಷ್ಣಾಬೈರೆಗೌಡ, ಎಂ.ಬಿ.ಪಾಟೀಲ್, ಸಂತೋಷ್ ಲಾಡ್ ಮೊದಲಾದವರ ದಂಡು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಬೀಡು ಬಿಟ್ಟಿತ್ತು‌. ಅಭ್ಯರ್ಥಿ ಗೆಲುವಿಗೆ ಶ್ರಮಿಸಿತ್ತು. ಸ್ವಸಹಾಯ ಗುಂಪುಗಳು, ಪಡಿತರ ವಿತರಣೆಯ ಸ್ಟೋರ್ಗಳು ಮತದಾರರ ಬಳಿ ತೆರಳಲು ಇವರಿಗೆ ಮಾರ್ಗಗಳಾಗಿದ್ದವು. ಕನಕಪುರದ ದಂಡು ಬಂದು ತಮ್ಮ ನೇತೃತ್ವದಲ್ಲಿ ಮತದಾರರ ಮನೆಗೆ  ನಿಯತ್ತಾಗಿ ಲಕ್ಷ್ಮೀಯನ್ನು ಕರೆತಂದಿದ್ದರು ಇವೆಲ್ಲ ಗೆಲುವಿಗೆ ಸಹಕಾರಿಯಾಗಿದ್ದವು‌. 
ಕ್ಷೇತ್ರದಲ್ಲಿ ಒಟ್ಟು 1,88,307 ಮತದಾರರಲ್ಲಿ 1,38,034 ಮತದಾರರು ಮತ ಚಲಾಯಿಸಿದ್ದರು. ಅಂದರೆ ಶೇ 73.31 ರಷ್ಟು ಮತದಾನವಾಗಿತ್ತು.
ಕಳೆದ 2013 ರಲ್ಲಿ ನಡೆದ ಚುನಾವಣೆ ವೇಳೆಯಂತೆ ಈ ಉಪ ಚುನಾವಣೆಯಲ್ಲೂ ತಾಲೂಕಿನ ಹಳೆ ಯರ್ರಗುಡಿ ಕ್ಷೇತ್ರದ ಮತಗಟದಟೆ ಸಂಖ್ಯೆ 157 ರಲ್ಲಿ ಅತ್ಯಧಿಕ ಅಂದರೆ ಶೇ.91.70 ರಷ್ಟು ಮತದಾನವಾಗಿತ್ತು. ಅತಿ‌ಕಡಿಮೆ ಮತದಾನ ನಗರದ ಸೇಂಟ್ ಫಿಲೋಮಿನಾ ಶಾಲೆಯ ಮತಗಟ್ಟೆ ಸಂಖ್ಯೆ 18 ರಲ್ಲಿ ಅತಿ ಕಡಿಮೆ ಅಂದರೆ ಶೇ 39.77 ರಷ್ಟು ಮತದಾನವಾಗಿತ್ತು. ಚುನಾವಣಾಧಿಕಾರಿಗಳಾಗಿ ಅಮನದಿನ ಜಿಲ್ಲಾಧಿಕಾರಿ ಸಮೀರ್ ಶುಕ್ಲ ಅವರು ಕಾರ್ಯ  ನಿರ್ವಹಿಸಿದ್ದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ 500 ರೂ, ಬಿಜೆಪಿ 300 ರೂ ಕೊಟ್ಟಿದ್ದರ ಬಗ್ಗೆ ಮತದಾರರು ಹೇಳಿದ್ದರು. ಸಹಜವಾಗಿ ಈ ಚುನಾವಣೆಯಲ್ಲಿ ಹಣದ ಮೊತ್ತ ಹೆಚ್ಚು ವೆಚ್ಚ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಜಯ ದೊರೆತಿತ್ತು.
ಮತಗಳ ಎಣಿಕೆ ಅ 25 ರಂದು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ  14 ಟೇಬಲ, 15 ಸುತ್ತುಗಳಲ್ಲಿ ನಡೆಯಿತು.
ಈ ಹಿಂದಿನ ಮೂರು ಚುನಾವಣೆಗಳಲ್ಲಿ ಶ್ರೀರಾಮುಲು  ಜಯಗಳಿಸುವಾಗ ನಡೆದಂತೆ ಈ ಬಾರಿ ಕ್ರಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಅವರು ಮೊದಲ ಸುತ್ತಿನಿಂದಲೇ  ಲೀಡ್ ಹೆಚ್ಚಿಸಿಕೊಳ್ಳುತ್ತಲೇ ಬಂದರು. 83,906 ಮತ ಪಡೆದು 33,104 ಮತಗಳ ಅಂತರದಿಂದ ಜಯ ಸಾಧಿಸಿದರು. ಕ್ಷೇತ್ರ ರಚನೆಯಾದ ನಂತರ ಕಾಂಗ್ರೆಸ್‌ಗೆ ಮೊದಲ ಗೆಲುವಾಗಿತ್ತು.
ಬಿಜೆಪಿ ಅಭ್ಯರ್ಥಿ ಓಬಳೇಶ್ 50, 802 ಮತ ಪಡೆದರು, ಪಕ್ಷೇತರ ಅಭ್ಯರ್ಥಿಗಳಾದ ಬಿ.ರಘು-1114, ಜಿ.ಚಂದ್ರಶೇಕರ್-419, ಬಿ.ರಾಮುಡು-587, ನೋಟಾಗೆ 1190 ಮತಗಳು ಬಂದಿದ್ದವು.
ಬದಲಾವಣೆ ಬಯಸಿ:
ಕಾಂಗ್ರೆಸ್ ಅಭ್ಯರ್ಥಿ ಎನ್.ವೈ ಗೋಪಾಲಕೃಷ್ಣ ಕ್ಷೇತ್ರದ ಜನತೆ ಬದಲಾವಣೆ ಬಯಸಿ ನನ್ನನ್ನು ಆಯ್ಕೆ ಮಾಡಿದ್ದಾರೆ, ಕಳೆದ ಹತ್ತು ವರ್ಷಗಳಿಂದ ಜನ ಇತರೇಪಕ್ಷದವರನ್ನು ಆಯ್ಕೆ ಮಾಡಿ ಬೇಸತ್ತಿದ್ದರು ಕ್ಷೇತ್ರದ ಅಭಿವೃದ್ದಿಗಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಡಿ.ಕೆ.ಶೀವಕುಮಾರ್ ಅವರ ಬೆಂಬಲದಿಂದ ಆಯ್ಕೆಗೆ ಸಹಕಾರಿಯಾಗಿದೆ. ಕ್ಷೇತ್ರದ ಅಭಿವೃದ್ದಿಗೆ ದುಡಿಯುವೆ ಚುನಾವಣೆಯಲ್ಲಿ ಹಣ ಹಂಚಿದೆಂಬ ಆರೋಪವನ್ನು ತಳ್ಳಿಹಾಕಿದ್ದರು.
ಅಣ್ಣನಿಗೆ ಸೋಲು ತಮ್ಮನಿಗೆ ಗೆಲುವು:
ಒಂದು ರೀತಿಯಲ್ಲಿ ಶ್ರೀರಾಮುಲು ಮತ್ತು ಜನಾರ್ಧನರೆಡ್ಡಿ ಗುಂಪಿಗೆ  ಎನ್.ವೈ.ಹನುಮಂತಪ್ಪ ಗುರುಗಳಂತೆ ಇದ್ದರು, ಅವರ ಬೆಳವಣಿಗೆಗೆ ಸಹಕಾರಿಯಾಗಿದ್ದರು.
ಆದರೆ ಸ್ವತಃ ಹನಮುಂತಪ್ಪ ರಾಜಕೀಯದಿಂದ 2009 ರಲ್ಲಿ ಬಳ್ಳಾರಿ ಲೋಕಸಭೆಯಿಂದ ಕಣಕ್ಕಿಳಿದರೆ . ಅವರ ವಿರುದ್ದ ಶ್ರೀರಾಮುಲು ಸಹೋದರಿ ಶಾಂತಾ ಅವರನ್ನು ಕಣಕ್ಕಿಳಿಸಿ ಸೋಲಿಸಿದರೆ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶ್ರೀರಾಮುಲು ಅವರಿಂದಲೇ ಸೋಲಬೇಕಾಯಿತು.
ಆದರೆ ಶ್ರೀರಾಮುಲು ಆಪ್ತ ಸಹಾಯಕನ ವಿರುದ್ದ ಹನಮಂತಪ್ಪ ಸಹೋದರ ಗೋಪಾಲಕೃಷ್ಣ ಜಯಕಂಡು ಶ್ರೀರಾಮುಲು ವಿರುದ್ದ ಜಯಸಾಧಿಸಿದಂತೆ ಆಗಿತ್ತು.
 ಅಲ್ಲಿ ತಿರಸ್ಕೃತ ಇಲ್ಲಿ ಪುರಸ್ಕೃತ:
ನೆರೆಯ ಚಿತ್ರದುರ್ಗ ಜಿಲ್ಲೆಯ ಕೇವಲ 30 ಕಿಲೋ ಮೀಟರ್ ಅಂತರದ ಮೊಳಕಾಲ್ಮುರು ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ.  5 ನೇ ಬಾರಿಗೆ ಜನರಿಗೆ ಸ್ಪಂದಿಸುತ್ತಿಲ್ಲ ಎಂಬ ಕಾರಣದಿಂದ. 2013 ರಲ್ಲಿ   ನಡೆದ ಚುನಾವಣೆಯಲ್ಲಿ ಸೋಲುಂಡಿದ್ದ ಗೋಪಾಲಕೃಷ್ಣ ಅವರು ವಲಸೆ ಬಂದರೂ,  ಇಲ್ಲಿನ ಮತದಾರ ಭರ್ಜರಿ ಗೆಲವನ್ನು ತಂದು ಕೊಟ್ಟಿದ್ದ.
ಡಿ.ಕೆ.ಶಿ ತಂತ್ರ:
ಚುನಾವಣೆ ಘೋಷಣೆ ಆಗುತ್ತಿದ್ದಂತೆ ವಿಜಯದ ಗಳಿಗೆಯಲ್ಲಿ ಬಳ್ಳಾರಿಗೆ ಕಾಲಿರಿಸಿದ್ದೇನೆ ಎಂಬ ಹೇಳಿಕೆಯೊಂದಿಗೆ ಇಲ್ಲಿ ಚುನಾವಣಾ ಕಾರ್ಯತಂತ್ರ ಆರಂಭಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಚಾಣಾಕ್ಷತನದ ಬುದ್ದಿಯಿಂದ ಹೇಳಿದಂತೆ ಜಯವನ್ನು ತಂದುಕೊಟ್ಟರು.
ಪರಸ್ಪರ ಕಾಲೆಳೆಯುತ್ತ ಭಿನ್ನ ಗುಂಪುಗಳಾಗಿದ್ದ ಜಿಲ್ಲೆಯ ಮುಖಂಡರನ್ನು ಒಂದು ಗೂಡಿಸಿದ್ದು. ಕಾರ್ಯಕರ್ತರಿಗೆ ಗೆಲುವು ತಂದುಕೊಟ್ಟರೆ ಏನೆಲ್ಲಾ ಸಹಕಾರ ಆಗುತ್ತದೆಂಬ ಪಾಠ, ಜೊತೆಗೆ ಸರಕಾರ ಇದೆ ಇನ್ನೂ 3 ವರೆ ವರ್ಷ ನಿಮ್ಮ ಜೊತೆಗೆ ಇರುತ್ತೇವೆ. ಅಭಿವೃದ್ದಿ ಮಾಡುತ್ತೇವೆ ಎಂಬ ಭರವಶೆ.
ಮುಖ್ಯವಾಗಿ ಚುನಾವಣಾ ಸಂದರ್ಭದಲ್ಲಿ ಮತದಾರಿನಗೆ ಏನೆಲ್ಲ ಸಹಕಾರ ಮಾಡಿದರೆ ಮತದಾರ ತಮಗೆ ಒಲಿಯುತ್ತಾನೆ ಮತ್ತು ಹೇಗೆ ಅವರನ್ನು ತಲುಪಬಹುದು ಎಂಬುದನ್ನು ಕಂಡುಕೊಂಡು ಅವರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದು.
ಇದಲ್ಲದೆ ಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿ ಮೊದಲಾದವರು  ಜೆಡಿಎಸ್‍ನಿಂದ ಕಾಂಗ್ರೆಸ್ ಸೇರ್ಪಡೆ. ಅಲ್ಪ ಸಂಖ್ಯಾತ ಮತಗಳು ವಿಂಗಡಣೆಯಾಗದಂತೆ ಕಾಯ್ದುಕೊಂಡಿದ್ದು ಜಯಲಕ್ಷ್ಮಿಗೆ ಕಾರಣವಾಗಿತ್ತು ಎನ್ನಬಹುದು.
 ತಪ್ಪಿದ ಹಿಡಿತ.
ಸ್ವತಃ ಶ್ರೀರಾಮುಲು ಇಲ್ಲ ಕುಟುಂಬ ವರ್ಗದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿಲ್ಲ. ಆಪ್ತ ಸಹಾಯಕನೆಂಬ ಕಾರಣ, ಮುಖ್ಯವಾಗಿ ಮತದಾರನ್ನು ತಲುಪಲು ಇವರು ಕಂಡುಕೊಂಡಿದ್ದ ಮತ್ತು ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಅಂದರೆ ಹೆಚ್ಚಿನ ಹಣವನ್ನು ಕಾಂಗ್ರೆಸ್ ಹಂಚಿದ್ದು. ಮಾಹಿತಿ ಪ್ರಕಾರ ಬಿಜೆಪಿಯವರು 300 ಕೊಟ್ಟರೆ ಕಾಂಗ್ರೆಸ್‍ನವರು 500 ರೂಪಾಯಿ ನೀಡಿದ್ದು. ಡಿ.ಕೆ.ಶಿವಕಮಾರ್ ಸೋಮಶೇಖರ ರೆಡ್ಡಿ ಮನೆಗೆ ಹೋಗಿದ್ದು. ಮಾಜಿ ಸಂಸದರಾದ ಶಾಂತಾ , ಸಣ್ಣ ಪಕ್ಕೀರಪ್ಪ ದೂರ ಉಳಿದಿದ್ದು.
ಹಣಕ್ಕಾಗಿ ಹಂಬಲಿಸುವ ಗುಂಪನ್ನು ಹಿಡಿದಿಟ್ಟುಕೊಳ್ಳದೇ ಹೋದದ್ದು. ಈಗ ಗಣಿಗಾರಿಕೆ ಇಲ್ಲದೆ ಹಣದ ಕೊರತೆ.  ಶ್ರೀರಾಮುಲು ಹೊಂದಿದ್ದ ಹಿಡಿತ ತರಪ್ಪಲು ಕಾರಣವಾಗಿತ್ತು ಎನ್ನಬಹುದು.
ಸೋಲಿನ ಹೊಣೆ ನನ್ನದು:
ಅಭ್ಯರ್ಥಿಯ
ಸೋಲಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ  ಶ್ರೀರಾಮುಲು ಸಹಜವಾಗಿ ಈ ಸೋಲಿನ ಜವಬ್ದಾರಿಯನ್ನು ನಾನೇ ಹೊರುತ್ತೇನೆ. ಪಕ್ಷದಲ್ಲಿನ ಅಸಮಾಧಾನ, ಅಲ್ಪ ಸಂಖ್ಯಾತರು ನಮ್ಮಿಂದ ದೂರವಾದ ಬಗ್ಗೆ ಆರೋಪ ಮಾಡುವುದಿಲ್ಲ. ಕಾಂಗ್ರೆಸ್‍ನವರ ಹಣ, ಅಭಿವೃದ್ದಿಯ ಭರವಶೆ, ಆಡಳಿತದ ದುರುಪಯೋಗ ಸೋಲಿಗೆ ಕಾರಣ ಎಂದರು.
ಈ ಹಿಂದೆ ಸೋನಿಯಾ ಪ್ಯಾಕೇಜಿನಂತೆ ಕ್ಷೇತ್ರದ ಅಭಿವೃದ್ದಿಗೆ ಪ್ಯಾಕೇಜ್ ಘೋಷಣೆ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅದಕ್ಕೆ ನಾನು ಸಹಕರಿಸುತ್ತೇನೆ ಅನುಷ್ಟಾನ ಮಾಡದಿದ್ದರೆ ಅದರ ವಿರುದ್ದ ಹೋರಾಟ ಮಾಡುತ್ತೇನೆ. ಮುಂದೆ ಈ ಕ್ಷೇತ್ರ ನನ್ನದೇ ಎಂದು ಸಾಬೀತು ಮಾಡುವೆ ಎಂದು ಪ್ರತಿಕ್ರಿಯೆ ನೀಡಿದ್ದರು.
ಈಗ ಮತ್ತೆ ಅಂದು ಹೇಳಿದಂತೆ ಈ ಕ್ಷೇತ್ರ ನನ್ನದು ಎಂದು ಸಾಬೀತು ಮಾಡುವ ಕಾಲ ಸನ್ನಿಹಿತವಾಗಿದೆ. ಈ ಬಾರಿ ಚುನಾವಣೆಯಲ್ಲಿ ಕಳೆದ ಎರೆಡು ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಬಿಜೆಪಿ ಮಾಡುದ ತಪ್ಪುಗಳನ್ನು ಹೇಗೆ ಸರಿ‌ಮಾಡಿಕೊಳ್ಳುತ್ತಾರೆ. ತಾವೇ ಸ್ಪರ್ಧೆ ಮಾಡುವುದರಿಂದ ಯಾವ ರೀತಿ‌  ಶ್ರೀರಾಮುಲು ಯುದ್ದ ತಂತ್ರ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.