ಉಪ-ಚುನಾವಣೆ ನಾಳೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು,ಮಾ.೧೯- ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ನಾಳೆ ಅಂತಿಮಗೊಳಿಸಲಿದೆ.
ಅಭ್ಯರ್ಥಿಗಳ ಆಯ್ಕೆ ಸಂಬಂಧ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ನೇತೃತ್ವದಲ್ಲಿ ಬಿಜೆಪಿಯ ಕೋರ್‌ಕಮಿಟಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಅನುಮೋದನೆಗೆ ಕಳುಹಿಸಲಾಗುವುದು ಎಂದು ಬಿಜೆಪಿ ಮೂಲಗಳು ಹೇಳಿವೆ.
ಅರುಣ್‌ಸಿಂಗ್ ಅವರು ನಾಳೆ ಬೆಳಿಗ್ಗೆ ೧೦ ಗಂಟೆಗೆ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು ಮುಖಂಡರೊಂದಿಗೆ ಉಪ ಚುನಾವಣೆಯ ಸಂಬಂಧ ಚರ್ಚೆ ನಡೆಸುವರು.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ದಿವಂಗತ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಪುತ್ರಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಅವರ ಸೊಸೆ ಶ್ರದ್ಧಾ ಶೆಟ್ಟರ್ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ.
ಉಪಚುನಾವಣೆ ಟಿಕೆಟ್‌ಗಾಗಿ ಸಚಿವ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ, ಮಾಜಿ ಸಂಸದ ಪ್ರಭಾಕರ್‌ಕೋರೆ ಅವರು ಪ್ರಯತ್ನ ನಡೆಸಿದ್ದು, ಒಂದು ವೇಳೆ ಶ್ರದ್ಧಾ ಶೆಟ್ಟರ್ ಅವರಿಗೆ ಟಿಕೆಟ್ ಬೇಡ ಎಂಬ ತೀರ್ಮಾನವಾದರೆ ಸಚಿವ ಜಗದೀಶ್‌ಶೆಟ್ಟರ್ ಅವರೇ ಉಪಚುನಾವಣೆ ಅಭ್ಯರ್ಥಿಯಾಗುವ ಸಾಧ್ಯತೆಯೂ ಇದೆ.
ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೇ ನೀಡಿ ಬಿಜೆಪಿ ಸೇರಿರುವ ಪ್ರತಾಪ್‌ಗೌಡ ಪಾಟೀಲ್ ಅವರೇ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ.
ಬಸವ ಕಲ್ಯಾಣ ಕ್ಷೇತ್ರದಿಂದ ಮಾಜಿ ಶಾಸಕ ಮಲ್ಲಿಕಾರ್ಜುನ ಕೂಬ ಅವರಿಗೆ ಟಿಕೆಟ್ ಸಿಕ್ಕುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಅಭ್ಯರ್ಥಿ ಪ್ರಕಟ
ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಾಗಲೇ ಅಭ್ಯರ್ಥಿಯ ಆಯ್ಕೆಯನ್ನು ಪ್ರಕಟಿಸಿದ್ದು, ಬಸವ ಕಲ್ಯಾಣ ಕ್ಷೇತ್ರದಿಂದ ದಿವಂಗತ ಶಾಸಕ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಹಾಗೆಯೇ ಮಸ್ಕಿ ಉಪಚುನಾವಣೆಗೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಈಗ ಕಾಂಗ್ರೆಸ್ ಸೇರಿರುವ ಬಸವನಗೌಡ ತುರವಿಹಾಳ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಇನ್ನು ಉಪಚುನಾವಣೆ ದಿನಾಂಕ ನಿಗದಿಯಾಗದ ಸಿಂಧಗಿ ಕ್ಷೇತ್ರಕ್ಕೂ ಕಾಂಗ್ರೆಸ್ ಮಾಜಿ ಸಚಿವ ದಿವಂಗತ ಎಂ.ಸಿ ಮನಗುಳಿ ಅವರ ಪುತ್ರ ಅಶೋಕ್ ಮನಗುಳಿ ಅವರಿಗೆ ಟಿಕೆಟ್ ನೀಡಿದೆ.
ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದನ್ನು ಕಾಯ್ದು ನೋಡಿ ಅಭ್ಯರ್ಥಿ ಆಯ್ಕೆ ಮಾಡಲಿ ತೀರ್ಮಾನಿಸಿದೆ.
ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಜೆಡಿಎಸ್ ಅಭ್ಯರ್ಥಿ
ಜೆಡಿಎಸ್ ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಗೆ ಸೈಯದ್ ಉಸ್ತಾದ್ ಆಲಿ ಖಾದ್ರಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಉಳಿದ ಕ್ಷೇತ್ರಗಳ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ಇನ್ನು ಅಂತಿಮಗೊಳಿಸಿಲ್ಲ.
ಈ ಉಪ ಚುನಾವಣೆಗೆ ಮಾ. ೩೦ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ.