ಉಪ ಚುನಾವಣೆ : ಚಾಮರಾಜನಗರದಲ್ಲಿ ಬಿಜೆಪಿಯಿಂದ ವಿಜಯೋತ್ಸವ

ಚಾಮರಾಜನಗರ, ನ.11: ರಾಜ್ಯದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದರಿಂದ ಚಾಮರಾಜನಗರದಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಸಂಜೆ 4.30 ರ ಸಮಯದಲ್ಲಿ ಜಿಲ್ಲಾ ಬಿಜೆಪಿ ಕಛೇರಿಯಿಂದ ಜಯದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಹೊರಟ ಕಾರ್ಯಕರ್ತರು ರಥದ ಮೂಲಕ ಹಾದು ಭುವನೇಶ್ವರಿ ವೃತ್ತದಲ್ಲಿ ಜಮಾವಣೆಗೊಂಡು ನರೇಂದ್ರಮೋದಿ, ಯಡಿಯೂರಪ್ಪ ರವರಿಗೆ ಜೈಕಾರ ಹಾಕಿದರು. ನಂತರ ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಘಟಕ ಅಧ್ಯಕ್ಷ ನಾಗರಾಜು ರಾಜರಾಜೇಶ್ವರಿ ನಗರ ಹಾಗೂ ಶಿರಾ ಮತದಾರರು ಯಡಿಯೂರಪ್ಪರವರ ಆಡಳಿತವನ್ನು ಮೆಚ್ಚಿ ಪಕ್ಷದ ಅಭ್ಯರ್ಥಿಗಳನ್ನು ಜಯಗೊಳಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಎಸ್.ಟಿ.ಮೋರ್ಚಾ ಉಪಾಧ್ಯಕ್ಷ ಎಂ. ರಾಮಚಂದ್ರ, ಜಿಲ್ಲಾ ಅಧ್ಯಕ್ಷ ಆರ್. ಸುಂದರ್, ಚೂಡಾ ಮಾಜಿ ಅಧ್ಯಕ್ಷ ಎಸ್. ಬಾಲಸುಬ್ರಹ್ಮಣ್ಯ, ಮಾಜಿ ನಗರಸಭಾ ಅಧ್ಯಕ್ಷರುಗಳಾದ ಮಹದೇವನಾಯಕ, ಸುರೇಶ್‍ನಾಯಕ, ಮುಖಂಡ ನಿಜಗುಣರಾಜು, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಪ್ರಶಾಂತ್, ಹಿಂದುಳಿದ ಮೋರ್ಚಾ ಅಧ್ಯಕ್ಷ ನಂದೀಶ್, ನಗರಸಭಾ ಮಾಜಿ ಸದಸ್ಯ ರಾಜೇಶ್, ಬಿಜೆಪಿ ಮಾಧ್ಯಮ ಪ್ರಮುಖ್ ಮಂಜುನಾಥ್, ಮುಖಂಡರಾದ ನಟರಾಜ್, ಭೋಗಾಪುರ ಕುಮಾರ್, ಪೃಥ್ವಿರಾಜ್, ಶಿವು ಮುಂತಾದವರು ಭಾಗವಹಿಸಿದ್ದರು.