ಉಪ ಚುನಾವಣೆಗೆ ಅಖಾಡ ಸಿದ್ಧ

ಬೆಂಗಳೂರು,ಅ.೧೫- ಈ ತಿಂಗಳ ೩೦ ರಂದು ಚುನಾವಣೆ ನಡೆಯಲಿರುವ ರಾಜ್ಯದ ಸಿಂಧಗಿ ಮತ್ತು ಹಾನಗಲ್ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ, ವಾಪಾಸಾತಿ ಪ್ರಕ್ರಿಯೆಗಳು ಮುಗಿದು ಚುನಾವಣಾ ಅಖಾಡ ಸಿದ್ಧಗೊಂಡಿದೆ. ಗೆಲುವಿಗಾಗಿ ಜಿದ್ದಾಜಿದ್ದಿಯೇ ನಡೆಯುತ್ತಿದ್ದು, ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷವಾದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಚುನಾವಣಾ ಸಮರಕ್ಕೆ ಅಣಿಯಾಗಿವೆ.
ದಸರಾ ಹಬ್ಬದ ನಂತರ ಈ ಎರಡೂ ಕ್ಷೇತ್ರಗಳಲ್ಲೂ ಮೂರು ಪಕ್ಷಗಳು ಅಬ್ಬರದ ಪ್ರಚಾರ ನಡೆಸಲಿದ್ದು, ಮೂರೂ ಪಕ್ಷಗಳ ಪ್ರಮುಖ ಮುಖಂಡರುಗಳು ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದು, ಚುನಾವಣಾ ಕಣ ರಂಗೇರಲಿದೆ.
ಈ ಉಪಚುನಾವಣೆ ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯಾಗಿದ್ದು, ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಗ್ನಿ ಪರೀಕ್ಷೆಯಾಗಿದೆ.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿರುವುದರಿಂದ ಸಹಜವಾಗಿಯೇ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ತಮ್ಮ ನಾಯಕತ್ವವನ್ನು ಭದ್ರಪಡಿಸಿಕೊಳ್ಳುವ ಉಮೇದಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದಾರೆ.
ಈ ಉಪಚುನಾವಣೆಯ ಗೆಲುವಿಗಾಗಿ ಬಿಜೆಪಿ ತನ್ನದೇ ಆದ ರಣತಂತ್ರಗಳನ್ನು ರೂಪಿಸಿ ಹಲವು ಸಚಿವರುಗಳಿಗೆ ಚುನಾವಣೆಗ ಜವಾಬ್ದಾರಿಯನ್ನು ಹಂಚಿಕೆ ಮಾಡಿದೆ. ಹಾಗೆಯೇ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಎಲ್ಲ ನಾಯಕರುಗಳು ಒಟ್ಟಾಗಿ ಮೂರು ತಂಡಗಳಲ್ಲಿ ಚುನಾವಣಾ ಪ್ರಚಾರ ನಡೆಸಲು ಸಿದ್ಧತೆಗಳನ್ನು ಬಿಜೆಪಿಯಲ್ಲಿ ಮಾಡಿಕೊಳ್ಳಲಾಗಿದೆ.
ವಿರೋಧ ಪಕ್ಷವಾದ ಕಾಂಗ್ರೆಸ್‌ಗೂ ಈ ಚುನಾವಣೆ ಪ್ರತಿಷ್ಠೆಯಾಗಿದ್ದು, ಈ ಚುನಾವಣೆಗಳನ್ನು ಗೆಲ್ಲುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಹೊಸ ಭಾಷ್ಯ ಬರೆಯುವ ತವಕದಲ್ಲಿ ಕಾಂಗ್ರೆಸ್ ನಾಯಕರುಗಳಿದ್ದು, ಚುನಾವಣಾ ಗೆಲುವಿಗಾಗಿ ಶತಪ್ರಯತ್ನ ನಡೆಸಿದ್ದಾರೆ.
ಅಂತಃಕಲಹ, ಒಳ ಜಗಳ, ಗುಂಪುಗಾರಿಕೆಯಿಂದ ನಲುಗಿರುವ ಕಾಂಗ್ರೆಸ್‌ಗೆ ಈ ಚುನಾವಣೆಯ ಗೆಲುವು ಚೈತನ್ಯ ನೀಡುವ ಟಾನಿಕ್ ಆಗಲಿದ್ದು, ಗೆಲುವಿಗಾಗಿ ಕಾಂಗ್ರೆಸ್ ರಣ ತಂತ್ರಗಳನ್ನು ರೂಪಿಸಿದೆ. ಬಿಜೆಪಿಯ ರಣತಂತ್ರಗಳಿಗೆ ಸವ್ವಾ ಸೇರು ಎಂಬಂತೆ ಕಾಂಗ್ರೆಸ್ ಸಹ ತನ್ನದೇ ಅದ ಚುನಾವಣಾ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಗೆಲುವಿಗಾಗಿ ಸರ್ವ ಪ್ರಯತ್ನ ನಡೆಸಿದೆ.
ಈ ಉಪಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕಿಲ್ಲ ಎಂಬ ನಾಯಕರುಗಳಿಗೆ ಬುದ್ಧಿ ಕಲಿಸುವ ಶಪಥ ತೊಟ್ಟಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ವ್ಯೂಹ ರಚನೆ ಮಾಡಿ ಜೆಡಿಎಸ್‌ನ್ನು ಗೆಲುವಿನ ದಡ ಮುಟ್ಟಿಸಲು ತಂತ್ರ ಹೆಣೆದಿದ್ದಾರೆ.
ಈ ಎರಡೂ ಉಪಚುನಾವಣೆಗಳ ಉಸ್ತುವಾರಿಯನ್ನು ಹೊತ್ತಿರುವ ಕುಮಾರಸ್ವಾಮಿ ಅವರು, ಸಿಂಧಗಿ ಉಪಚುನಾವಣೆಯಲ್ಲಿ ಗೆದ್ದು, ಕ್ಷೇತ್ರ ಉಳಿಸಿಕೊಳ್ಳುವ ಬಯಕೆ ಹೊಂದಿದ್ದಾರೆ. ಸಿಂಧಗಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ಮೊಕ್ಕಾಂ ಹೂಡಿ ಪ್ರಚಾರ ನಡೆಸಲು ಮುಂದಾಗಿದ್ದು, ಜೆಡಿಎಸ್‌ನ ಶಕ್ತಿ ತೋರಿಸಲು ಈ ನಾಯಕರುಗಳು ಅಣಿಯಾಗಿದ್ದಾರೆ.
ದಸರಾ ಹಬ್ಬದ ನಂತರ ಮುಂದಿನ ವಾರದಿಂದ ಉಪಚುನಾವಣೆಯ ಪ್ರಚಾರದ ಕಾವು ತಾರಕಕ್ಕೇರುವುದು ನಿಶ್ಚಿತ,

ಈ ತಿಂಗಳ ೧೭ ರಿಂದ ಉಪಚುನಾವಣಾ ಪ್ರಚಾರ ಆರಂಭಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ೧೭ ರಿಂದ ೨ ದಿನಗಳ ಕಾಲ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ, ನಂತರ ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮೊದಲ ಸುತ್ತಿನ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ, ದಸರಾ ಶುಭಾಶಯ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿಂಗಳ ೧೭ ರಿಂದ ತಾವು ಉಪಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರು, ಈ ತಿಂಗಳ ೨೦ರ ನಂತರ ಉಪಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗುವರು. ಅವರ ಜತೆ ಈ ಬಗ್ಗೆ ಮಾತನಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ-ಯಡಿಯೂರಪ್ಪ ಭೇಟಿ ಬಗ್ಗೆ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಯಡಿಯೂರಪ್ಪರವರೇ ಭೇಟಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಟ್ವೀಟ್‌ಗೆ ಪ್ರತಿ ಟ್ವೀಟ್ ಇದ್ದೇ ಇರುತ್ತದೆ ಎಂದಷ್ಟೇ ಹೇಳಿದರು.
ಬಿಜೆಪಿಯ ಶಾಸಕ ಮಸಾಲೆ ಜಯರಾಂ ಅವರು ನನ್ನ ಒಳ್ಳೆಯ ಗೆಳೆಯರು, ಅವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು.