ಉಪ ಕಾಲುವೆಗಳಿಗೆ ಶಾಸಕರ ಭೇಟಿ: ನೀರು ಒದಗಿಸಲು ಸೂಚನೆ

ಸಿರವಾರ.ನ.೦೮- ತಾಲೂಕಿನ ಅತ್ತನೂರು ಹಾಗೂ ಶಾಖಾಪುರ ಗ್ರಾಮದ ರೈತರು ತುಂಗಭದ್ರಾ ಎಡದಂಡೆ ಕಾಲುವೆಯ ಉಪ ಕಾಲುವೆ ನಂಬರ್ ೯೫ ಮತ್ತು ೯೬ ಡಿಸ್ಟ್ರಿಬ್ಯೂಟರ್‌ಗಳಲ್ಲಿ ಸಮರ್ಪಕವಾಗಿ ನೀರಿನ ಗೇಜ್ ಇಲ್ಲದ ಕಾರಣ ಮಂಗಳವಾರ ನೂರಾರು ರೈತರು ಜಮಾಯಿಸಿದ್ದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಜಿ.ಹಂಪಯ್ಯ ನಾಯಕ ಅವರು ಕೆಳಭಾಗಕ್ಕೆ ನೀರು ಹರಿಸುವಲ್ಲಿ ವಿಫಲವಾಗುತ್ತಿರುವ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಬೆಳೆದು ನಿಂತ ಮೆಣಸಿನಕಾಯಿ, ಹತ್ತಿ, ಜೋಳ, ಕಡಲೆ ಬೆಳೆಗಳಿಗೆ ನೀರು ಒದಗಿಸದಿದ್ದರೇ ಲಕ್ಷಾಂತರ ರೂ. ಹೂಡಿ ಗೊಬ್ಬರ ಕ್ರಿಮಿನಾಶಕ ಸೇರಿದಂತೆ ಇತರೆ ಖರ್ಚು ಮಾಡಿದ್ದಾರೆ. ಬೆಳೆ ಕೈಗೆ ಬರದಿದ್ದರೆ ರೈತರ ಬದುಕು ಶೋಚನೀಯ ಸ್ಥಿತಿಗೆ ತಲುಪಲಿದೆ ಅದಕ್ಕಾಗಿ ಕೂಡಲೇ ಕೆಳ ಭಾಗದ ಉಪ ಕಾಲುವೆ ಗಳಿಗೆ ನೀರನ್ನು ಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮುಖಂಡರಾದ ಬಸವರಾಜ ಪಾಟೀಲ ಅತ್ತನೂರು, ನಾಗನಗೌಡ ಅತ್ತನೂರು, ನವೀನ ಪಾಟೀಲ, ಅತ್ತನೂರು ಮತ್ತು ಶಾಕಾಪುರದ ರೈತರು ಸೇರಿದಂತೆ ನೂರಾರು ರೈತರಿದ್ದರು.