ಉಪ ಕದನ ಸಿಎಂಗೆ ಸಿಹಿಕಹಿ

ವಿಜಯಪುರ ಜಿಲ್ಲೆ ಸಿಂದಗಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಭರ್ಜರಿ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಬೆಂಗಳೂರು,ನ.೨- ರಾಜ್ಯದಲ್ಲಿ ಜಿದ್ದಾಜಿದ್ದಿಯ ಹೋರಾಟ ನಡೆದಿದ್ದ ಎರಡು ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಸಿಂದಗಿಯಲ್ಲಿ ಕಮಲ ಅರಳಿದ್ದು, ಹಾನಗಲ್‌ನಲ್ಲಿ ’ಕೈ’ ಮೇಲುಗೈ ಸಾಧಿಸಿದೆ. ತೆನೆ ಹೊತ್ತ ಮಹಿಳೆಗೆ ಎರಡೂ ಕ್ಷೇತ್ರಗಳಲ್ಲೂ ಠೇವಣಿ ಹೋಗಿದೆ.
ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾಗೂ ಮುಖ್ಯಮಂತ್ರಿಗಳು ಪ್ರತಿನಿಧಿಸುವ ಶಿಗ್ಗಾಂವ್ ಕ್ಷೇತ್ರದ ಪಕ್ಕದ ಹಾನಗಲ್‌ನಲ್ಲೇ ಸೋಲಾಗಿರುವುದು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾದಂತಾಗಿದೆ. ತವರು ಜಿಲ್ಲೆಯಲ್ಲೇ ಸೋಲಾಗಿರುವುದು ಮುಖ್ಯಮಂತ್ರಿಗಳ ವರ್ಚಸ್ಸು ಮತ್ತು ನಾಯಕತ್ವಕ್ಕೂ ಕುಂದು ತಂದಿದೆ.
ಮುಖ್ಯಮಂತ್ರಿಯಾದ ನಂತರ ಬಸವರಾಜ ಬೊಮ್ಮಾಯಿ ಅವರಿಗೆ ಎದುರಾದ ಮೊದಲ ಅಗ್ನಿ ಪರೀಕ್ಷೆಯಲ್ಲಿ ಮುಖ್ಯಮಂತ್ರಿಗಳು ತವರು ಜಿಲ್ಲೆಯಲ್ಲಿ ಸೋಲನುಭವಿಸಿದ್ದರೂ ಸಿಂದಗಿಯಲ್ಲಿ ಗೆಲ್ಲುವ ಮೂಲಕ ಮಿಶ್ರಫಲ ಪಡೆದಿದ್ದಾರೆ.
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಾನಗಲ್‌ನಲ್ಲಿ ಗೆಲ್ಲುವ ಮೂಲಕ ಪ್ರಾಬಲ್ಯ ಸಾಧಿಸಿದ್ದು, ಜೆಡಿಎಸ್ ಸೋತು ಸುಣ್ಣವಾಗಿದೆ. ಜೆಡಿಎಸ್ ಈ ಹಿಂದೆ ಗೆದ್ದಿದ್ದ ಸಿಂದಗಿ ಕ್ಷೇತ್ರ ಈಗ ಬಿಜೆಪಿಯ ಪಾಲಾಗಿದೆ.
ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರ ಅವರು, ಕಾಂಗ್ರೆಸ್‌ನ ಅಶೋಕ್ ಮನಗೂಳಿ ವಿರುದ್ಧ ೩೦ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಹಾನಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನವರ್‌ಗಿಂತ ಹೆಚ್ಚು ಮತ ಪಡೆದು ವಿಜಯಮಾಲೆ ಧರಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳಿಗೆ ಠೇವಣಿ ಹೋಗಿದೆ.
ಈ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದು ಕ್ಷೇತ್ರ ಗೆದ್ದು ಸಮಬಲ ಸಾಧಿಸಿದ್ದರೆ, ಜೆಡಿಎಸ್ ಇದ್ದ ಒಂದು ಕ್ಷೇತ್ರವನ್ನು ಕಳೆದುಕೊಂಡು ಮುಖಭಂಗಕ್ಕೆ ಒಳಗಾಗಿದೆ.
ಈ ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ತೀವ್ರ ಹಿನ್ನಡೆ ಅನುಭವಿಸಿದ್ದು, ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮ್ಯಾಜಿಕ್ ಮಾಡಲಿದೆ ಎಂಬುದು ಸುಳ್ಳಾಗಿದೆ.
ಸಿಂದಗಿ ಮತ್ತು ಹಾನಗಲ್ ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ನಿರೀಕ್ಷಿಸಿದಷ್ಟು ಮತ ಪಡೆದಿಲ್ಲ. ಸಿಂದಗಿ ಮತ್ತು ಹಾನಗಲ್‌ನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್ ಪರ ಪ್ರಚಾರ ನಡೆಸಿದ್ದರೂ ಮತದಾರರು ಜೆಡಿಎಸ್‌ಗೆ ಹೆಚ್ಚಿನ ಒಲವು ತೋರಿಲ್ಲ.
ಸಿಂದಗಿಯಲ್ಲಿ ೬ ತಿಂಗಳ ಹಿಂದೆಯೇ ದಿ. ಮಾಜಿ ಸಚಿವ ಎಂ.ಸಿ ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರೂ ಅದು ಗೆಲುವಿಗೆ ಸಹಕಾರಿಯಾಗಿಲ್ಲ.
ಸಿಂದಗಿಯಲ್ಲಿ ಬಿಜೆಪಿ ನಾಯಕರ ಸಾಂಘಿಕ ಪ್ರಯತ್ನಗಳು ಗೆಲುವಿಗೆ ಸಹಕಾರಿಯಾಗಿವೆ. ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲ ನಾಯಕರುಗಳು ಒಟ್ಟಾಗಿ ಪ್ರಚಾರ ನಡೆಸಿದ್ದು, ಬಿಜೆಪಿಗೆ ಚುನಾವಣೆಯಲ್ಲಿ ಗೆಲುವನ್ನು ತಂದು ಕೊಟ್ಟಿದೆ. ಆದರೆ, ಹಾನಗಲ್‌ನಲ್ಲಿ ಮಾತ್ರ ಬಿಜೆಪಿಯ ಸಾಂಘಿಕ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಇಲ್ಲಿ ಕಾಂಗ್ರೆಸ್ ತನ್ನದೇ ಆದ ಚುನಾವಣಾ ತಂತ್ರಗಳ ಮೂಲಕ ಗೆದ್ದು ಬೀಗಿದೆ.
ಈ ಚುನಾವಣೆಯ ಪ್ರಚಾರದಲ್ಲಿ ವಿಷಯಾಧಾರಿತ ಪ್ರಚಾರಕ್ಕಿಂತ ವೈಯಕ್ತಿಕ ವಿಚಾರಗಳೇ ಪ್ರಚಾರದ ಸರಕಾಗಿ ವಾಕ್ಸಮರ ಬಿರುಸಾಗಿತ್ತು. ವೈಯಕ್ತಿಕ ವಿಚಾರಗಳು ಚುನಾವಣೆಯಲ್ಲಿ ಮುನ್ನೆಲೆಗೆ ಬಂದಿದ್ದು, ಪ್ರಜಾತಂತ್ರ ವ್ಯವಸ್ಥೆಗೆ ಒಳ್ಳೆಯ ಬೆಳವಣಿಗೆಯಲ್ಲ ಎಂಬ ಮಾತುಗಳು ಕೇಳಿ ಬಂದಿತ್ತಾದರೂ ರಾಜಕೀಯ ಪಕ್ಷಗಳ ನೇತಾರರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಗೆಲುವಿನತ್ತ ಮಾತ್ರ ಗಮನ ಕೇಂದ್ರೀಕರಿಸಿದ್ದರು.
ಕುತೂಹಲ ಕೆರಳಿಸಿದ ಮತ ಎಣಿಕೆ
ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳ ಮತ ಎಣಿಕೆ ಇಂದು ಬೆಳಿಗ್ಗೆ ೮ ಗಂಟೆಗೆ ಆರಂಭವಾಗಿದ್ದು, ಸಿಂದಗಿ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆಯಿಂದಲೇ ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರು ಮುನ್ನಡೆ ಕಾಯ್ದುಕೊಂಡಿದ್ದು, ೨೨ ಸುತ್ತುಗಳ ಮತ ಎಣಿಕೆ ನಂತರ ಭರ್ಜರಿ ಗೆಲುವು ಪಡೆದರು. ಇಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರ ಅವರಿಗೆ ೯೩,೮೬೫ ಮತಗಳು, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರಿಗೆ ೬೨,೬೮೩ ಮತಗಳು, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಅವರಿಗೆ ೪,೩೫೩ ಮತಗಳು ಬಂದವು.
ಹಾನಗಲ್ ಕ್ಷೇತ್ರದ ಮತ ಎಣಿಕೆ ಪ್ರತಿ ಸುತ್ತಿನಲ್ಲೂ ಕುತೂಹಲ ಮೂಡಿಸಿದ್ದು, ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅಲ್ಪ ಮುನ್ನಡೆ ಪಡೆದರು. ೨ನೇ ಸುತ್ತಿನಲ್ಲಿ ಬಿಜೆಪಿಯ ಶಿವರಾಜ್ ಸಜ್ಜನರ್ ಮುನ್ನಡೆ ಸಾಧಿಸಿದರು.
ಪ್ರತಿ ಸುತ್ತಿನಲ್ಲೂ ಮತಗಳ ಹಾವು-ಏಣಿಯಾಟ ಮುಂದುವರೆಯಿತು. ವಿಜಯಲಕ್ಷ್ಮಿ ತೂಗುಯ್ಯಾಲೆಯಲ್ಲಿದ್ದಳಾದರೂ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ವಿಜಯದ ಮಾಲೆ ಧರಿಸಿದರು. ಇಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್ಚು ಮತ ಗಳಿಸಲು ಸಾಧ್ಯವಾಗಿಲ್ಲ.