ಉಪ್ಪು ತಿಂದವರು ನೀರು ಕುಡಿಯಬೇಕು

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೨೮:ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಸದ ಪ್ರಜ್ವಲ್‌ರೇವಣ್ಣ ಅವರ ಅಶ್ಲೀಲ ವೀಡಿಯೋ ವೈರಲ್ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿರುವ ರಾಜ್ಯಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಾಗಲಿ,ಮಾಜಿ ಪ್ರಧಾನಿ ದೇವೇಗೌಡರಾಗಲಿ ಎಂದೂ ಸಹ ಹೆಣ್ಣು ಮಕ್ಕಳ ವಿಚಾರದಲ್ಲಿ ಅತ್ಯಂತ ಗೌರವದಿಂದ ನಡೆದುಕೊಂಡು ಬಂದಿದ್ದೇವೆ. ಯಾರಾದರು ಕಷ್ಟ ಹೇಳಿಕೊಂಡು ಬಂದರೆ ಅವರಿಗೆ ಸ್ಪಂದಿಸಿದ್ದೇವೆ ಎಂದರು.
ಸಂಸದ ಪ್ರಜ್ವಲ್‌ರೇವಣ್ಣ ಅವರ ಅಶ್ಲೀಲ ವೀಡಿಯೋ ವೈರಲ್ ಬಗ್ಗೆ ಎಸ್‌ಐಟಿ ತನಿಖೆಗೆ ಸರ್ಕಾರ ಆದೇಶಿಸಿದೆ. ತನಿಖೆಯಿಂದ ವಾಸ್ತವಾಂಶ ಹೊರಗೆ ಬರಲಿದೆ. ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲಿ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು.
ಈ ಪ್ರಕರಣದ ಬಗ್ಗೆ ತನಿಖೆಯ ನಂತರ ಸತ್ಯ ಹೊರ ಬರಲಿ, ನಂತರ ಮಾತನಾಡುತ್ತೇನೆ ಎಂದರು.
ಸಂಸದ ಪ್ರಜ್ವಲ್‌ರೇವಣ್ಣ ಅವರು ವಿದೇಶಕ್ಕೆ ಹೋಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೂ ನನಗೂ ಸಂಬಂಧವಿಲ್ಲ, ತನಿಖೆ ನಡೆಸುತ್ತಿರುವ ಎಸ್‌ಐಟಿ ಅವರು ಅವರನ್ನು ವಿದೇಶದಿಂದ ಕರೆಸುತ್ತಾರೆ ಎಂದಷ್ಟೇ ಹೇಳಿದರು.
ಬರ ಪರಿಹಾರ ಕಡಿಮೆ ಬಂದಿದೆ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರು ನಡೆಸಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರು ಎಲ್ಲದ್ದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನನ್ನ ಪ್ರಕಾರ ಕಾಂಗ್ರೆಸ್ ಸರ್ಕಾರ ಕೇಳಿರುವುದು ಸುಮಾರು ೪ ಸಾವಿರ ಕೋಟಿ ರೂ. ಇನ್‌ಪುಟ್ ಸಬ್ಸಿಡಿ, ಅದರಂತೆ ಕೇಂದ್ರ ೩,೪೫೪ ಕೋಟಿ ಬಿಡುಗಡೆ ಮಾಡಿದೆ ಎಂದರು.
ಈ ಹಿಂದೆ ಮನ್‌ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ೧೦ ವರ್ಷಗಳಲ್ಲಿ ರಾಜ್ಯಕ್ಕೆ ಎನ್‌ಡಿಆರ್‌ಎಫ್‌ನಿಂದ ಬಂದಿದ್ದು ಶೇ. ೮ ರಷ್ಟು ಹಣ, ಆದರೆ, ಮೋದಿ ಅವರು ಪ್ರಧಾನಿಯಾದ ನಂತರ ೮ ವರ್ಷಗಳಲ್ಲಿ ಶೇ. ೩೮ ರಷ್ಟು ಎನ್‌ಡಿಆರ್‌ಎಫ್ ಹಣಬಂದಿದೆ ಎಂದರು.