ಉಪ್ಪಿನಂಗಡಿ: ೩೪ನೇ ನೆಕ್ಕಿಲಾಡಿ ಸ್ಥಳೀಯಾಡಳಿತದಿಂದ `ಧರ್ಮಾಧಾರಿತ’ ಸಮಾಜ ಒಡೆಯುವ ಹುನ್ನಾರ-ಆರೋಪ

ಪುತ್ತೂರು, ಜೂ.೮- ಉಪ್ಪಿನಂಗಡಿ ಸಮೀಪದ ೩೪ ನೆಕ್ಕಿಲಾಡಿ ಗ್ರಾಪಂ ವ್ಯಾಪ್ತಿಯ ಮೈಂದನಡ್ಕದಲ್ಲಿ ಸಾರ್ವಜನಿಕ ಆಟದ ಮೈದಾನದ ಪ್ರವೇಶ ದಾರಿಯನ್ನು ಮುಚ್ಚುವ ಮೂಲಕ ಧರ್ಮಾಧಾರಿತ ರಾಜಕಾರಣದಿಂದ ಸಮಾಜದ ಸಾಮರಸ್ಯವನ್ನು ಒಡೆಯುವ ಹುನ್ನಾರ ಗ್ರಾಪಂ ನಡೆಸಿದ್ದು.  ಇದೊಂದು ಸಂಘರ್ಷದ ವಾತಾವರಣ ಉಂಟುಮಾಡುವ ಕಾರ್ಯವಾಗಿದೆ ಎಂದು ಮೈಂದನಡ್ಕ ಶಾಂತಿ-ಸೌಹಾರ್ದತೆ ಉಳಿಸಿ ಹೋರಾಟ ಸಮಿತಿ ಆರೋಪಿಸಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಎ.ಜತೀಂದ್ರ ಶೆಟ್ಟಿ ಅಲಿಮಾರ್ ಮಾತನಾಡಿ, ಸುಮಾರು ೫೫ ಸೆಂಟ್ಸ್ ಜಾಗವನ್ನು ಕಳೆದ ಎಂಟು ವರ್ಷಗಳಿಂದ ಸತತ ಹೋರಾಟದ ಮೂಲಕ ಸಾರ್ವಜನಿಕ ಮೈದಾನಕ್ಕೆ ತಾನು ಕೊಡಿಸಿದ್ದು, ಇದೀಗ ಈ ಜಾಗ ಕಂದಾಯ ಇಲಾಖೆಯ ವಶದಲ್ಲಿದೆ. ಆದರೆ ನೆಕ್ಕಿಲಾಡಿ ಗ್ರಾಪಂ ಆಡಳಿತ ಸಾರ್ವಜನಿಕ ಮೈದಾನವಾಗಿರುವ ಈ ಜಾಗದಲ್ಲಿ ಧರ್ಮಾಧಾರಿತ ರಾಜಕಾರಣಕ್ಕೆ ಬಳಸಿಕೊಳ್ಳುವ ಹಿನ್ನಲೆಯಿಂದ  ಮೈದಾನ ಪ್ರವೇಶಿಸುವ ಜಾಗದಲ್ಲಿ ಅಗಲು ನಿರ್ಮಿಸಿ ಮೈದಾನ ಪ್ರವೇಶಿಸದಂತೆ ಮಾಡುವ ಮೂಲಕ ಒಂದು ಧರ್ಮಕ್ಕೆ ಮಾತ್ರ ಮೀಸಲಿಡುವ ಹುನ್ನಾರ ನಡೆಸಿದೆ. ಈ ಮೈದಾನದಲ್ಲಿ ಮಕ್ಕಳು ಸೈಕಲ್ ಸವಾರಿ ಮಾಡುವುದು, ಆಟವಾಡುವುದು, ವಾಕಿಂಗ್ ಮಾಡುತ್ತಿದ್ದರು. ಪಕ್ಕದಲ್ಲೇ ಕ್ರೈಸ್ತ ಧರ್ಮದ ದಫನ ಭೂಮಿ ಹಾಗೂ ಪ್ರಾರ್ಥನಾ ಮಂದಿರವಿದೆ. ವಾರ್ಷಿಕ ಹಾಗೂ ತಿಂಗಳ ಮರಣ ಪೂಜೆಗೆ ಬರುವವರಿಗೆ ವಾಹನ ಪಾರ್ಕಿಂಗ್‌ಗೂ ಈ ಮೈದಾನದಿಂದ ಅನುಕೂಲವಾಗುತ್ತಿತ್ತು. ಇದೀಗ ಸ್ಥಳೀಯಾಡಳಿತವಾಗಿರುವ ಗ್ರಾಪಂ ಉದ್ದೇಶಪೂರ್ವಕವಾಗಿ ಈ ಅಗಲು ತೆಗೆದು ಸಮಸ್ಯೆಯನ್ನು ಸೃಷ್ಟಿಸಿದೆ. ಸಂಘರ್ಷದ ಹಾದಿಗೆ ವಾತಾವರಣವನ್ನು ತಲುಪಿಸಿದೆ. ಇಂತಹದ್ದಕ್ಕೆ ಸ್ಥಳೀಯಾಡಳಿತ ತಡೆ ಒಡ್ಡುವ ಕೆಲಸ ಮಾಡುವ ಬದಲು ತಾನೇ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ತಕ್ಷಣ ಮೈದಾನ ಪ್ರವೇಶದ ದ್ವಾರದಲ್ಲಿ ಅಗಲು ತೆಗೆದ ಸ್ಥಳದಲ್ಲಿ ಮೋರಿ ಅಳವಡಿಸಿ ಮಕ್ಕಳಿಗೆ ಆಟವಾಡಲು ಅವಕಾಶ ನೀಡಬೇಕು. ಈ ಹಿಂದಿನಂತೆ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು. ಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಅಬ್ದುರ್ರಹ್ಮಾನ್, ರಾಜ್ಯ ರೈತ ಸಂಘ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ಉಪಸ್ಥಿತರಿದ್ದರು.