ಉಪ್ಪಾರ ಸಮಾಜವನ್ನು ಎಸ್ಸಿ ಎಸ್ಟಿಗೆ ಸೇರ್ಪಡೆ ಮಾಡಲು ಒತ್ತಾಯ

ರಾಯಚೂರು, ನ.೦೨, ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಉಪ್ಪಾರ ಸಮಾಜವು ಕರ್ನಾಟಕ ರಾಜ್ಯದಲ್ಲಿ ಸುಮಾರು ೫೦ ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಅತಿ ಹಿಂದೆ ಜಾತಿಯಾಗಿರುತ್ತದೆ. ಈ ಸಮಾಜವನ್ನು ಸುಮಾರು ದಶಕಗಳಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಸೇರಿಸಲು ಸಮಾಜದ ಪೂಜ್ಯರು ಹಾಗೂ ಹಿರಿಯರು ಬೃಹತ್ ಸಮಾವೇಶಗಳನ್ನು ಏರ್ಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದರೂ ಇಲ್ಲಯವರೆಗೆ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ದೂರಿದರು.
ಉಪ್ಪಾರ ಸಮಾಜವು ಮೀಸಲಾತಿಗಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಹಿಂದುಳದ ವರ್ಗಗಳ ಆಯೋಗಗಳಾದ ನ್ಯಾ. ಹಾವನೂರು ಆಯೋಗ, ನ್ಯಾ, ವೆಂಕಟಸ್ವಾಮಿ ಆಯೋಗ, ನ್ಯಾ, ಚಿನ್ನಪ್ಪಾ ರೆಡ್ಡಿ ಆಯೋಗ, ಈ ಎಲ್ಲಾ ಆಯೋಗಗಳ ವರದಿಯಲ್ಲಿ ಉಪ್ಪಾರ ಸಮಾಜ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೀತಿಯಲ್ಲಿ ಹಿಂದುಳದಿದ್ದು, ಈ ಸಮಾಜಕ್ಕೆ ಮೀಸಲಾತಿ ನೀಡಿ ಮುಖ್ಯವಾಹಿನಿಗೆ ತರಬೇಕೆಂದು ಎಲ್ಲ ವರದಿಗಳಲ್ಲಿ ತಿಳಿಸಿದ್ದಾರೆ. ಆದರೆ ಯಾವ ಸರ್ಕಾರಗಳೂ ಉಪ್ಪಾರ, ಜಾತಿಯನ್ನು ಇಲ್ಲಿಯವರೆಗೂ ಮೀಸಲಾತಿ ಪಟ್ಟಿಗೆ ಸೇರಿಸುವ ಪ್ರಯತ್ನ ಮಾಡಿರುವದಿಲ್ಲ. ಈಗ ಉಪ್ಪಾರ ಸಮಾಜದ ಕುಲ ಶಾಸ್ತ್ರೀಯ ಅಧ್ಯಯನ ಸುಮಾರು ೦೪ ವರ್ಷಗಳವರೆಗೆ ನಡೆದು ಅಂತಿಮವಾಗಿ ರಾಜ್ಯ ಮಟ್ಟದ ಸಂಘಟನೆಗಳ ಸಹಯೋಗದಲ್ಲಿ ಹಾಗೂ ಉಪ್ಪಾರ ಮುಖಂಡರ ಮತ್ತು ಸಮಾಜದ ಬಂಧುಗಳ ಸಲಹೆ, ಮಾಹಿತಿ, ವರದಿ ಇತ್ಯಾದಿಗಳನ್ನು ಪಡೆದು ಕರಡು ವರದಿಯನ್ನು ಸಿದ್ಧಪಡಿಸಿ ಅದನ್ನು ಈಗಾಗಲೇ ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕರಿಗೆ ಸಲ್ಲಿಸಲಾಗಿದೆ.
ಉಪ್ಪಾರ ಸಮಾಜದ ಉಪ ಜಾತಿಗಳಾದ ಕೂಸರು, ಮಂಡಾಲರು, ಭಟದಾ ಮತ್ತು ಮಹರಾ ಈ ಜಾತಿಗಳು ಕಾರವಾರ, ಮಂಗಳೂರು ಉಡುಪಿ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು, ಈಗಾಗಲೇ ಅವರನ್ನು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಿರುತ್ತದೆ. ಆದರೆ ಉಪ್ಪಾರ ಜಾತಿಯನ್ನು ಮಾತ್ರ ಪರಿಶಿಷ್ಟ ಜಾತಿ ಪಂಗಡಕ್ಕೆ ಸೇರಿಸದೇ ಇರುವದು ದುರದುಷ್ಟಕರ ಸಂಗತಿ ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿ. ಲತಾ, ಜೈ ಶೈಲಜಾ, ಶ್ರಾವಣಿ, ಮಾಲತಿ ಬಿ.ಎಸ್, ಆದಿಲಕ್ಷ್ಮೀ ಹಾಗೂ ಸಂಧ್ಯಾ ಸೇರಿದಂತೆ ಉಪಸ್ಥಿತರಿದ್ದರು.