
ಬೆಂಗಳೂರು,ಆ.೧೪-ತಮ್ಮ ಮೇಲೆ ಎರಡು ಕಡೆ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಖ್ಯಾತ ನಟ-ನಿರ್ದೇಶಕ ಉಪೇಂದ್ರ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಈಗಾಗಲೇ ತಾವು ಆಡಿದ ಮಾತಿನ ಬಗ್ಗೆ ಕ್ಷಮೆ ಕೇಳಿದ್ದೇನೆ. ಜೊತೆಗೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ಡಿಲಿಟ್ ಮಾಡಿದ್ದೇನೆ. ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶದಿಂದ ಆಡಿದ ಮಾತು ಅದಾಗಿರಲಿಲ್ಲವೆಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಒಂದು ಕಡೆ ಎಫ್‌ಐಆರ್ ರದ್ದು ಕೋರಿ ಉಪೇಂದ್ರ ಅರ್ಜಿ ಸಲ್ಲಿಸಿದ್ದರೆ, ಮತ್ತೊಂದು ಕಡೆ ರಾಜ್ಯ ನಾನಾ ಕಡೆಗಳಲ್ಲೂ ಇವರ ವಿರುದ್ಧ ದೂರು ನೀಡಲಾಗುತ್ತಿದೆ. ನಗರದ ಎರಡು ಕಡೆ ಎಫ್‌ಐಆರ್ ದಾಖಲಾಗಿದ್ದರೆ ಮಂಡ್ಯ ಮತ್ತು ಕೋಲಾರದಲ್ಲೂ ಪೊಲೀಸ್ ಠಾಣೆಗೆ ಉಪೇಂದ್ರ ವಿರುದ್ಧ ದೂರು ದಾಖಲಾಗಿದ್ದು ರಾಜ್ಯದ ಹಲವೆಡೆ ಪ್ರತಿಭಟನೆಗಳು ಕೂಡ ನಡೆಯುತ್ತಿವೆ.
ಈ ನಡುವೆ ಚೆನ್ನಮ್ಮನ ಅಚ್ಚುಕಟ್ಟು ಪೊಲೀಸರು ನಟ ಉಪೇಂದ್ರಗೆ ನೋಟೀಸ್ ಕೊಡುತ್ತಿದ್ದಂತೆ ಫೋನ್ ಸ್ವಿಚ್ ಆಪ್ ಮಾಡಿಕೊಂಡು ಅವರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬೇರೆಯವರ ಕಡೆಯಿಂದ ಉಪೇಂದ್ರ ಅವರನ್ನು ಪೊಲೀಸರು ಸಂಪರ್ಕ ಮಾಡಲು ಪ್ರಯತ್ನ ನಡೆಸಿದ್ದಾರೆ.
ಉಪೇಂದ್ರ ಅವರಿಗೆ ಸೇರಿದ ಎರಡು ಮನೆ ಹಾಗೂ ಅವರ ವಾಟ್ಸಪ್ ಗೆ ನೋಟೀಸ್ ಕಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐ ಆರ್ ಅನ್ನು ಕೂಡ ಎಸಿಪಿ ವಿವಿಪುರಂಗೆ ವರ್ಗಾವಣೆ ಮಾಡಲಿದ್ದಾರೆ.
ಮೊನ್ನೆ ರಾತ್ರಿ ತನ್ನ ಪ್ರಜಾಕೀಯ ಕುರಿತು ವಿಡಿಯೋ ಒಂದರಲ್ಲಿ ಮಾತನಾಡುತ್ತಾ ಉಪೇಂದ್ರ ಒಂದು ಸಾಮುದಾಯಿಕವಾಗಿ ನಿಂದನಾತ್ಮಕವಾಗಿರುವ ಗಾದೆ ಮಾತೊಂದನ್ನು ಬಳಸಿದ್ದರು. ನಂತರ ಆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಕ್ಷಮೆ ಕೇಳುವ ಮೂಲಕ ಪ್ರಕರಣವನ್ನು ಅಂತ್ಯಗೊಳಿಸಲು ಪ್ರಯತ್ನಸಿದ್ದರು.
ಆದರೆ ಸಾಮಾಜಿಕ ಹೋರಾಟಗಾರರು ಇದನ್ನು ಹಾಗೇ ಬಿಟ್ಟರೆ ಮತ್ತೆ ಮತ್ತೆ ಇಂತಹ ಸಮುದಾಯಗಳನ್ನು ಅವಮಾನಿಸುವ ಗಾದೆಗಳ ಬಳಕೆ ಹೆಚ್ಚಾಗುತ್ತದೆಯೆನ್ನುವ ಕಾರಣಕ್ಕೆ ಹೋರಾಟವನ್ನು ಕೈಗೆತ್ತಿಕೊಂಡು ಉಪೇಂದ್ರ ವಿರುದ್ಧ ಕೇಸ್ ದಾಖಲಿಸಿದ್ದರು.
ನಿನ್ನೆ ಈ ಕುರಿತು ಟ್ವೀಟ್ ಮಾಡಿದ್ದ ಉಪೇಂದ್ರ ಅಲ್ಲಿಯೂ “ನಾನು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಮಯದಲ್ಲಿ ಈಗ ನನ್ನ ವಿರುದ್ಧ ದೂರು ಕೊಡುತ್ತಿರುವವರು ಹುಟ್ಟಿಯೇ ಇರಲಿಲ್ಲ” ಎನ್ನುವ ಉದ್ಧಟತನದ ಮಾತುಗಳನ್ನೇ ಆಡಿದ್ದರು. ಆದರೆ ಇಂದು ತನ್ನ ಟ್ವಿಟರ್ ಖಾತೆಯನ್ನು ಲಾಕ್ ಮಾಡಿಟ್ಟುಕೊಂಡಿದ್ದರು
ಉಪೇಂದ್ರ ವಿರುದ್ಧ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ದೂರು ನೀಡಿದರೆ, ಹಲಸೂರು ಗೇಟ್ ಠಾಣೆಯಲ್ಲಿ ಭೈರಪ್ಪ ಹರೀಶ್ ಎನ್ನುವವರು ನೀಡಿದ ದುರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.