
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೧೬:ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬಿಜೆಪಿ ಶಾಸಕರು ಬರುವುದಾದರೆ ಅವರಿಗೆ ಸ್ವಾಗತ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳುವ ಮೂಲಕ ಕಾಂಗ್ರೆಸ್ ಸೇರ ಬಯಸುವ ಶಾಸಕರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.
ಯಾರೇ ಆಗಲಿ ಕಾಂಗ್ರೆಸ್ ಸಿದ್ಧಾಂತ ನಾಯಕತ್ವ ನಂಬಿ ಪಕ್ಷಕ್ಕೆ ಬರುವುದಾದರೆ ಬರಬಹುದು, ಹಿಂದೇ ಪಕ್ಷ ಬಿಟ್ಟು ಹೋದವರೂ ಕೂಡ ಪಕ್ಷಕ್ಕೆ ಬರಲು ಅಡ್ಡಿ ಇಲ್ಲ ಆದರೆ, ಅವರಿಗೆ ಫಸ್ಟ್ ಬೆಂಚ್ ಸಿಗಲ್ಲ, ಅದಕ್ಕೆ ತುಂಬ ದಿನ ಕಾಯಬೇಕಾಗುತ್ತದೆ ಎಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಪಕ್ಷಕ್ಕೆ ಬರುವವರನ್ನು ಪರಿಶೀಲನೆ ಮಾಡಿ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಈಗಾಗಲೇ ಹೇಳಿದ್ದಾರೆ, ಪಕ್ಷ ಬಿಟ್ಟು ಹೋಗಿರುವವರು ವಾಪಸ್ ಬಂದಿರುವ ಉದಾಹರಣೆ ಇದೆ, ತಪ್ಪು ಮಾಡಿದ್ದನ್ನು ಸರಿ ಮಾಡಿಕೊಳ್ಳುತ್ತೇವೆ ಎಂದರೆ ಅವಕಾಶ ನೀಡಲು ಅಡ್ಡಿ ಇಲ್ಲ, ಆದರೆ, ಪಕ್ಷಕ್ಕೆ ಬರುವವರಿಗೆ ಫಸ್ಟ್ ಬೆಂಚ್ ಸಿಗದೇ ಹೋದರೂ ಅವರಿಗೆ ಕ್ಲಾಸ್ ರೂಂನಲ್ಲಿ ಅವಕಾಶವಿದೆ. ಮತ್ತೆ ಫಸ್ಟ್ ಬೆಂಚ್ ಸಿಗಬೇಕಾದರೆ ತುಂ ದಿನಾ ಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಸೇರ್ಪಡೆ ಬಗ್ಗೆ ನನ್ನ ಜತೆ ಯಾವ ಶಾಸಕರು ಚರ್ಚೆ ಮಾಡಿದ್ದಾರೆ ಎಂಬ ಬಗ್ಗೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು ಅದಕ್ಕೆ ಏನು ಬೇಕೋ ಅದನ್ನು ಮಾಡುತ್ತೇವೆ ಎಂದರು.