ಉಪಸಮರ: 3 ಕ್ಷೇತ್ರಗಳಿಗೆ ನಾಳೆ ಮತದಾನ

ಬೆಂಗಳೂರು, ಏ. ೧೬- ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಯ ಮತದಾನ ನಾಳೆ ನಡೆಯಲಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ ಚುನಾವಣಾ ಆಯೋಗ ವ್ಯಾಪಕ ಭದ್ರತೆ ಕೈಗೊಂಡಿದೆ. ನಾಳೆ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಮೇ ೨ಕ್ಕೆ ಫಲಿತಾಂಶ ಹೊರಬೀಳಲಿದೆ.
ಬೆಳಗಾವಿ ಲೋಕಸಭೆ ಕ್ಷೇತ್ರ, ರಾಯಚೂರು ಜಿಲ್ಲೆಯ ಮಸ್ಕಿ ಹಾಗೂ ಬೀದರ್‌ನ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯುತ್ತಿದೆ. ಮದ್ಯದಂಗಡಿ ಬಂದ್ ಮಾಡಲಾಗಿದೆ.
ಮೂರು ಕ್ಷೇತ್ರಗಳಿಗೂ ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತದಾರರ ಓಲೈಕೆಗೆ ಅಂತಿಮ ಕಸರತ್ತಿನಲ್ಲಿ ತೊಡಗಿದ್ದಾರೆ.
ಬೆಳಗಾವಿ ಲೋಕಸಭಾ ಉಪ ಚುನಾವಣೆ ಅಖಂಡದಲ್ಲಿ ದಿ. ಸುರೇಶ್ ಅಂಗಡಿಯವರ ಪತ್ನಿ ಮಂಗಳ, ಕಾಂಗ್ರೆಸ್‌ನಿಂದ ಸತೀಶ್ ಜಾರಕಿಹೊಳಿ ಸ್ಪರ್ಧಿಸಿದ್ದು, ಗೆಲುವಿನ ಮಾಲೆ ಯಾರಿಗೆ ಎಂಬುದು ಕುತೂಹಲ ಕೆರಳಿಸಿದೆ.
ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್ ಬಸವನಗೌಡ ತುರವಿಹಾಳ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಎರಡು ಪಕ್ಷಗಳ ನಡುವೆ ಪೈಪೋಟಿ ಕಂಡುಬಂದಿದೆ.
ಬೀದರ್‌ನ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಶರಣು ಸಲಗಾರ, ಕಾಂಗ್ರೆಸ್‌ನಿಂದ ಮಾಲಾ ನಾರಾಯಣ್ ರಾವ್, ಜೆಡಿಎಸ್ ನಿಂದ ಸಯ್ಯದ್ ಖಾದ್ರಿ ಸ್ಪರ್ಧಿಸಿದ್ದಾರೆ. ಆದರೆ ಬಸವ ಕಲ್ಯಾಣದಲ್ಲಿ ಬಿಜೆಪಿಗೆ ಬಂಡಾಯ ಬಿಸಿ ತಟ್ಟಿದ್ದು, ಮಲ್ಲಿಕಾರ್ಜುನ ಕೂಬಾ ಸ್ಪರ್ಧಿಸಿದ್ದಾರೆ. ಹೀಗಾಗಿ ಗೆಲುವಿನ ಮಾಲೆ ಯಾರಿಗೆ ಎಂಬುದು ಎಡೆ ಮಾಡಿಕೊಟ್ಟೆದೆ. ಈ ಎಲ್ಲಾ ರಾಜಕೀಯ ಪಕ್ಷಗಳ ಹಣೆಬರಹವನ್ನು ಮತದಾರ ಪ್ರಭು ನಿರ್ಧರಿಸಲಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿ.ಎಸ್.ವೈ ಪುತ್ರ ಬಿ.ವಿ.ವೈ. ವಿಜಯೇಂದ್ರ, ಸಚಿವರು, ಶಾಸಕರು, ಅಬ್ಬರದ ಪ್ರಚಾರ ನಡೆಸಿದ್ದಾರೆ. ಆಡಳಿತರೂಢ ಬಿಜೆಪಿಗೆ ಈ ಚುನಾವಣೆ ಸವಾಲಾಗಿ ಪರಿಣಿಮಿಸಿದ್ದು, ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ.
ಮತ್ತೊಂದೆಡೆ ಪ್ರತಿಪಕ್ಷ ಕಾಂಗ್ರೆಸ್ ಪ್ರಚಾರ ಅಖಂಡಾದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದಿದ್ದು, ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ವ್ಯಾಪಕ ಪ್ರಚಾರ ನಡೆಸಿ ಮತದಾರರ ಓಲೈಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡು ಮತ ಭೇಟೆ ನಡೆಸಿದರು. ಚುನಾವಣಾ ಆಯೋಗದ ಸೂಚನೆ ಮೇರೆಗೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಕ್ಷೇತ್ರಗಳನ್ನು ಬಿಟ್ಟು ತೆರಳಿದ್ದಾರೆ.
ಮೂರು ಕ್ಷೇತ್ರಗಳಲ್ಲಿ ರಜೆ
ನಾಳೆ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾನಕ್ಕೆ ಅನುಕೂಲವಾಗುವಂತೆ ಸಾರ್ವಜನಿಕ ರಜೆ ಘೋಷಿಸಲಾಗಿದೆ.
ಸರ್ಕಾರಿ, ಖಾಸಗಿ ಶಾಲಾ, ಕಾಲೇಜುಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಿಬ್ಬಂದಿ, ಬ್ಯಾಂಕ್ ನೌಕರರಿಗೆ ವೇತನ ಸಹಿತ ರಜೆ ನೀಡಲಾಗಿದೆ.