ಉಪಸಮರ ಪ್ರಚಾರಕ್ಕೆ ತೆರೆ

ಬೆಂಗಳೂರು, ನ. ೧- ರಾಜರಾಜೇಶ್ವರಿನಗರ ಮತ್ತು ಸಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಪ್ರಚಾರ ಇಂದು ಸಂಜೆ ಅಂತ್ಯವಾಗಲಿದ್ದು, ಕ್ಷೇತ್ರದ ಮತದಾರರಲ್ಲದ ರಾಜಕೀಯ ನಾಯಕರುಗಳು ಇಂದು ಸಂಜೆ ೬ರ ನಂತರ ಕ್ಷೇತ್ರದಲ್ಲಿ ಉಳಿಯುವಂತಿಲ್ಲ ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಆಡಳಿತರೂಢಾ ಬಿಜೆಪಿ, ವಿರೋಧ ಪಕ್ಷವಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆಯಾಗಿರುವ ಈ ಎರಡೂ ಕ್ಷೇತ್ರಗಳಿಗೆ ನವೆಂಬರ್ ೩ ರಂದು ಮತದಾನ ನಡೆಯಲಿದ್ದು, ಇಂದು ಸಂಜೆ ೬ ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ.
ಕೊರೊನಾ ನಡುವೆಯೂ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿದೆ.
ಇಂದು ಸಂಜೆ ೬ ರ ನಂತರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ನಂತರ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ನಾಯಕರುಗಳು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಹೊರಗಡೆಯಿಂದ ಬಂದಿರುವ ಎಲ್ಲರೂ ಇಂದು ಸಂಜೆ ಕ್ಷೇತ್ರದಿಂದ ತೆರಳಬೇಕು ಎಂದು ಚುನಾವಣಾ ಆಯೋಗ ಈಗಾಗಲೇ ಸೂಚನೆ ನೀಡಿದೆ. ಅದರಂತೆ ಕಳೆದ ೧೫ ದಿನಗಳಿಂದ ಸಿರಾ ಮತ್ತು ರಾಜರಾಜೇಶ್ವರಿನಗರದಲ್ಲಿ ಮೊಕ್ಕಾಂ ಹೂಡಿ ತಮ್ಮ ತಮ್ಮ ಪಕ್ಷಗಳ ಪರವಾಗಿ ಪ್ರಚಾರ ನಡೆಸಿದ್ದ ಸಚಿವರುಗಳು ಶಾಸಕರು ಹಾಗೂ ರಾಜಕೀಯ ಪಕ್ಷದ ಮುಖಂಡರು ಇಂದು ಸಂಜೆ ೬ರ ನಂತರ ಕ್ಷೇತ್ರಗಳನ್ನು ಖಾಲಿ ಮಾಡಿ ತಮ್ಮ ತಮ್ಮ ಊರುಗಳಿಗೆ ವಾಪಸ್ಸಾಗಬೇಕು.
ಸಿರಾ ಮತ್ತು ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಖಾಡ ಜಿದ್ದಾಜಿದ್ದಿನಿಂದ ಕೂಡಿದ್ದು, ಗೆಲುವುಗಾಗಿ ಮೂರು ಪಕ್ಷಗಳು ಪೈಪೋಟಿ ನಡೆಸಿವೆ.
ಆಡಳಿತರೂಢಾ ಬಿಜೆಪಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ತಮ್ಮ ನೆಲೆಯನ್ನು ಉಳಿಸಿಕೊಂಡು ಪಕ್ಷದ ಸಂಘಟನೆಯನ್ನು ಬಲಪಡಿಸುವ ಚುನಾವಣೆಗಳಾಗಿವೆ. ಹಾಗಾಗಿ ಮೂರೂ ಪಕ್ಷಗಳಲ್ಲೂ ಗೆಲುವಿಗೆ ಹಣಾಹಣಿ ನಡೆದಿದೆ.
ಇಂದು ಬಹಿರಂಗ ಪ್ರಚಾರ ಅಂತ್ಯವಾದ ನಂತರ ನಾಳೆ ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಅವಕಾಶವಿದೆ.
ಉಪಚುನಾವಣೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಚುನಾವಣೆಗಳ ಕೊನೆ ಕ್ಷಣದ ಕರಾಮತ್ತುಗಳಿಗೆ ಅವಕಾಶವಾಗದಂತೆ ಚುನಾವಣಾ ಆಯೋಗ ಹದ್ದಿನಗಣ್ಣು ಇಟ್ಟಿದೆ.
ನವೆಂಬರ್ ೩ ರಂದು ಬೆಳಗ್ಗೆ ೭ರಿಂದ ೬ ಗಂಟೆವರೆಗೂ ಮತದಾನ ನಡೆಯಲಿದ್ದು, ನವೆಂಬರ್ ೧೦ ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.