ಉಪಸಮರ ಟಿಕೆಟ್‌ಗಾಗಿ ಪೈಪೋಟಿ

ಬೆಂಗಳೂರು, ಸೆ.೩೦- ಬಿಜಾಪುರ ಜಿಲ್ಲೆಯ ಸಿಂಧಗಿ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕಗಳನ್ನು ಪ್ರಕಟಿಸಿರುವ ಬೆನ್ನಲ್ಲೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಉಪಚುನಾವಣೆಯ ಟಿಕೆಟ್‌ಗಾಗಿ ಲಾಬಿ ಬಿರುಸಾಗಿದೆ.
ಅಕ್ಟೋಬರ್ ೩೦ ರಂದು ನಡೆಯಲಿರುವ ಈ ಎರಡೂ ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಅಧಿಸೂಚನೆ ಹೊರಬೀಳಲಿದ್ದು, ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.
ಈ ಉಪಚುನಾವಣೆಗೆ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಭಾರಿ ಲಾಬಿ ನಡೆದಿದೆ. ಸಿಂಧಗಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಮಾಜಿ ಸಚಿವ ದಿ. ಎಂ.ಸಿ ಮನಗುಳಿ ಅವರ ಪುತ್ರ ಅಶೋಕ್ ಮನಗುಳಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವುದಾಗಿ ಈಗಾಗಲೇ ಘೋಷಿಸಿದೆ. ಆದರೆ ಹಾನಗಲ್ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ದೊಡ್ಡ ಪೈಪೋಟಿಯೇ ನಡೆದಿದೆ.
ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪಮತದಿಂದ ಸೋಲನುಭವಿಸಿದ್ದ ಶ್ರೀನಿವಾಸ ಮಾನೆ ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರ ಬೆನ್ನಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿಂತಿದ್ದಾರೆ. ಆದರೆ, ಇದೇ ಕ್ಷೇತ್ರದಿಂದ ೪ ಬಾರಿ ಗೆದ್ದಿರುವ ವಿಧಾನಸಭೆಯ ಮಾಜಿ ಉಪಾಧ್ಯಕ್ಷ ಮನೋಹರ್ ತಹಶೀಲ್ದಾರ್ ಸಹ ಟಿಕೆಟ್ ಬಯಸಿದ್ದು, ಇವರಿಗೆ ಟಿಕೆಟ್ ನೀಡಲು ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಲವು ತೋರಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಮರಾಠಿ ಭಾಷಿಕರ ಮತಗಳು ನಿರ್ಣಾಯಕವಾಗಿರುವುದರಿಂದ ಶ್ರೀನಿವಾಸ್ ಮಾನೆ ಅವರಿಗೆ ಟಿಕೆಟ್ ನೀಡಬೇಕೆನ್ನುವುದು ಸಿದ್ದರಾಮಯ್ಯ ಬಣದ ನಾಯಕರ ಅಭಿಪ್ರಾಯವಾಗಿದೆ. ಆದರೆ, ಶ್ರೀನಿವಾಸ್ ಮಾನೆ ಹೊರಗಿನವರು. ಹಾಗಾಗಿ, ಈ ಕ್ಷೇತ್ರದವರೇ ಆದ ಮನೋಹರ್ ತಹಶೀಲ್ದಾರ್ ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎನ್ನುವುದು ಡಿ.ಕೆ ಶಿವಕುಮಾರ್ ಬಣದ ವಾದವಾಗಿದೆ. ಅಂತಿಮವಾಗಿ ಯಾರ ಕೈ ಮೇಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಹಾನಗಲ್ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಕಗ್ಗಂಟಿಗೆ ಪರಿಹಾರ ಕಂಡುಕೊಳ್ಳಲು ವಿರೋಧ ಪಕ್ಷದ ನಾಯಕ ಸಿದ್ದರಾiಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಪ್ರಮುಖ ಕಾಂಗ್ರೆಸ್ ನಾಯಕರು ಇಂದು ಸಂಜೆ ಸಭೆ ಸೇರಿ ಚರ್ಚಿಸಲಿದ್ದಾರೆ.
ಬಿಜೆಪಿಯಲ್ಲೂ ಪೈಪೋಟಿ
ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಗೆ ಟಿಕೆಟ್‌ಗಾಗಿ ಬಿಜೆಪಿಯಲ್ಲೂ ಪೈಪೋಟಿ ಜೋರಾಗಿದ್ದು, ಹಾನಗಲ್ ಕ್ಷೇತ್ರಕ್ಕೆ ಮಾಜಿ ಸಚಿವ ದಿ. ಸಿ.ಎಂ ಉದಾಸಿ ಅವರ ಸೊಸೆ ಸಂಸದ ಶಿವಕುಮಾರ್ ಉದಾಸಿ ಅವರ ಪತ್ನಿ ರೇವತಿ ಅವರಿಗೆ ಟಿಕೆಟ್ ನೀಡಬೇಕು ಎಂದು ಹಲವು ಮುಖಂಡರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ. ಇಲ್ಲಿ ಆರ್‌ಎಸ್‌ಎಸ್ ಮೂಲದ ರಾಜಶೇಖರ್ ಗೌಡ ಎಂಬುವರು ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ.
ಸಿಂಧಗಿಯಲ್ಲಿ ಮಾಜಿ ಶಾಸಕ ರಮೇಶ್‌ಬೂಸನೂರ ಟಿಕೆಟ್ ಕೇಳಿದ್ದು, ಅವರು ನಿನ್ನೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ರಮೇಶ್ ಬೂಸನೂರ ಅತ್ಯಲ್ಪ ಮತಗಳಿಂದ ಎಂ.ಸಿ ಮನಗುಳಿ ವಿರುದ್ಧ ಸೋತಿದ್ದರು.
ಈ ಕ್ಷೇತ್ರದಲ್ಲಿ ಶಿವಾನಂದಪಾಟೀಲ ಸೋಮಜಾಳ, ಅಶೋಕ್ ಅಲ್ಲಾಪುರ, ಡಾ. ಗೌತಮ್‌ಚೌಧರಿ, ಶಂಭುಕಕ್ಕಳ ಮೇಲಿ ಇವರುಗಳು ಸಹ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಜೆಡಿಎಸ್ ಈ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದು, ಹಾನಗಲ್ ಕ್ಷೇತ್ರದಿಂದ ಜೆಡಿಎಸ್ ನಯಾಜ್ ಅವರನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ. ಸಿಂಧಗಿ ಕ್ಷೇತ್ರದಿಂದ ಅಭ್ಯರ್ಥಿ ಆಯ್ಕೆ ಇನ್ನೂ ಆಗಿಲ್ಲ.
ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಅ. ೮ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಮುಂದಿನ ಬುಧವಾರದ ಒಳಗೆ ಮೂರೂ ಪಕ್ಷಗಳು ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲಿವೆ.

ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿಯ ಕೋರ್‌ಕಮಿಟಿ ಸಭೆ ಇದೇ (ಅ. ೩)ಭಾನುವಾರ ನಡೆಯಲಿದೆ. ಈ ಕೋರ್ ಕಮಿಟಿ ಸಭೆಯಲ್ಲಿ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಕ್ಕೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಹೈ ಕಮಾಂಡ್‌ನ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರುಗಳು ಪಾಲ್ಗೊಳ್ಳುವರು.