ಉಪಸಮರದ ಅಖಾಡಕ್ಕೆ ಧುಮುಕಿದ ಸಿಎಂ ಬಿಎಸ್‌ವೈ

ತುಮಕೂರು/ಸಿರಾ, ಅ. ೩೦- ಕಳೆದ ೭೦ ವರ್ಷಗಳ ಬಳಿ ಕೋಟೆ ನಾಡು ಸಿರಾದಲ್ಲಿ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ನಾಯಕರ ಉಮೇದಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮದಲೂರಿನಿಂದಲೇ ಚುನಾವಣಾ ಪ್ರಚಾರ ಆರಂಭಿಸಿರುವುದು ಒತ್ತಾಸೆ ನೀಡಿದಂತಾಗಿದ್ದು, ಉಪಚುನಾವಣೆಯ ರಣ ಕಣ ಮತ್ತಷ್ಟು ರಂಗು ಪಡೆದುಕೊಂಡಿದೆ.
ಈಗಾಗಲೇ ಸಿರಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮದಲೂರಿನಿಂದ ಚುನಾವಣಾ ಪ್ರಚಾರ ಆರಂಭಿಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಬೆಂಗಳೂರಿನಿಂದ ಮದಲೂರಿಗೆ ಕಾರಿನಲ್ಲಿಯೇ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಜಿಲ್ಲಾ ಬಿಜೆಪಿ ಹಾಗೂ ಸಿರಾ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಭವ್ಯ ಸ್ವಾಗತ ದೊರೆಯಿತು.
ಕಾರಿನಿಂದ ಕೆಳಗೆ ಇಳಿದು ಸುತ್ತಲೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರ ಕೈ ಬೀಸುತ್ತಿದ್ದಂತೆ ಯಡಿಯೂರಪ್ಪನವರ ಪರ ಜೈಕಾರ, ಜಯಘೋಷಗಳು ಮುಗಿಲು ಮುಟ್ಟಿದವು. ಬರದ ನಾಡಿಗೆ ಭಗೀರಥ ಬಂದ ಹಾಗೆ ನಾಡಿನ ದೊರೆ ಯಡಿಯೂರಪ್ಪನವರು ಬಂದಿದ್ದಾರೆ ಎಂಬ ಘೋಷಣೆಗಳು ಮೊಳಗಿದವು.
ಮದಲೂರಿನಲ್ಲಿ ಬಿಜೆಪಿ ಪಕ್ಷದ ಪರ ಮತಯಾಚಿಸುವುದಕ್ಕೂ ಮುನ್ನ ಪ್ರಮುಖ ರಾಜಕೀಯ ಅಸ್ತ್ರವಾಗಿರುವ ಮದಲೂರು ಕೆರೆಯನ್ನು ವೀಕ್ಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೆರೆಯ ವಿಸ್ತೀರ್ಣವನ್ನು ಕಂಡು ಅಚ್ಚರಿಗೆ ಒಳಗಾದರು.
ನಂತರ ಕೆರೆ ದಂಡೆಯ ಪಕ್ಕದಲ್ಲೇ ಸುಮಾರು ೩ ಎಕರೆ ಜಾಗದಲ್ಲಿ ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡ ಅವರು ಮದಲೂರಿಗೆ ಇದೇ ಮೊದಲ ಬಾರಿಗೆ ತಾವು ಭೇಟಿ ನೀಡಿದ್ದು, ಇಲ್ಲಿನ ಕೆರೆ, ಪರಿಸರವನ್ನು ಕಣ್ಣಾರೆ ಕಂಡಿದ್ದೇನೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್‌ಗೌಡರನ್ನು ಬೆಂಬಲಿಸಿದರೆ ಈ ಕೆರೆ ತುಂಬಿ ಈ ಭಾಗ ಸಂದ್ಭರಿತವಾಗಲಿದೆ. ಆದ್ದರಿಂದ ಸಿರಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಾರ್ಟಿಯ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಸಿರಾದಲ್ಲಿ ಕಳೆದ ೭೦ ವರ್ಷಗಳಿಂದ ಆಡಳಿತ ನಡೆಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿವೆ. ಗುಡಿಸಲು ವಾಸಿಗಳಿಗೆ ಸೂರು ಒದಗಿಸುವ ಕೊಡುವ ಗೋಜಿಗೆ ಈ ಪಕ್ಷಗಳು ಹೋಗಿಲ್ಲ. ಗೊಲ್ಲರಹಟ್ಟಿಗಳಲ್ಲಿ ಗುಡಿಸಲುಗಳಲ್ಲಿ ವಾಸಿಸುವವರ ಪಾಡು ಹೇಳತೀರದಾಗಿದೆ. ಇದ್ಯಾವುದೂ ೭೦ ವರ್ಷಗಳಿಂದ ಆಡಳಿತ ನಡೆಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಕಾಡುಗೊಲ್ಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು, ಈ ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು.
ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್‌ಗೌಡರನ್ನು ಗೆಲ್ಲಿಸಿದರೆ ಸಿರಾ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು. ಸಿರಾ ಮತ್ತು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿ ಈ ಭಾಗದ ರೈತರ ಹಿತ ಕಾಯಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು.