ಉಪವಿಭಾಗಾಧಿಕಾರಿಗಳಿಂದ ಉತ್ನಾಳ ಎಲ್‍ಟಿ 2 ಗೆ ಭೇಟಿಃ ಕೋವಿಡ್‍ಗೆ ಸೂಕ್ತ ಚಿಕಿತ್ಸೆ ಪಡೆಯಲು ಸೂಚನೆ

ವಿಜಯಪುರ, ಮೇ.26-ಜಿಲ್ಲಾಧಿಕಾರಿ ಪಿ, ಸುನಿಲ್‍ಕುಮಾರ್ ಅವರ ಸೂಚನೆ ಮೇರೆಗೆ ಇಂದು ಉಪವಿಭಾಗಾಧಿಕಾರಿಗಳಾದ ಬಲರಾಮ್ ಲಮಾಣಿ ಅವರು ಉತ್ನಾಳ ಎಲ್‍ಟಿ 2 ಗೆ ಭೇಟಿ ನೀಡಿ, ಕೊರೊನಾ ಸೋಂಕಿತ ಕುಟುಂಬಸ್ಥರಿಗೆ ಭೇಟಿ ಮಾಡಿ, ಕೊರೊನಾ ಪಾಸಿಟಿವ್ ಸೋಂಕಿತರು, ನೆಗೆಟಿವ್ ಸದಸ್ಯರಿಂದ ಪ್ರತ್ಯೇಕವಾಗಿ ವಾಸಿಸಲು ಮನವರಿಕೆ ಮಾಡಿದ್ದಾರೆ.
ಉತ್ನಾಳ ತಾಂಡ 2 ರಲ್ಲಿ ಒಟ್ಟು 35 ಜನರಿಗೆ ಕೋರೊನಾ ಸೋಂಕು ತಗುಲಿದ್ದರ ಬಗ್ಗೆ ಪಬ್ಲಿಕ್ ಟಿವಿ’ಯಲ್ಲಿ ಈ ವಿಷಯ ಭಿತ್ತರವಾದ ಹಿನ್ನೆಲೆಯಲ್ಲಿ ತಾಂಡಾಕ್ಕೆ ಭೇಟಿ ನೀಡಿ ಸಂಬಂಧಿಸಿದ ಕುಟುಂಬಕ್ಕೆ ಭೇಟಿ ಮಾಡಿ ಈ ರೀತಿ ಮನವರಿಕೆ ಮಾಡಿದ್ದಾರೆ.
ಪ್ರತ್ಯೇಕ ಕೋಣೆ ಇರದೇ ಇದ್ದ ಪಕ್ಷದಲ್ಲಿ ಗ್ರಾಮದಲ್ಲಿರುವ ಶಾಲೆಯಲ್ಲಿ ವಾಸವಿರುವಂತೆ ತಿಳಿಸಿದ್ದಾರೆ, ಹಾಗೂ ವೈದ್ಯರು ನೀಡಿದ ಮಾತ್ರೆಗಳನ್ನು ತಪ್ಪದೇ ಸೇವಿಸುವಂತೆ ಮತ್ತು ಆರೋಗ್ಯದಲ್ಲಿ ಏರುಪೇರು ಆದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವಂತೆ ಸೂಕ್ತ ತಿಳುವಳಿಕೆ ಸಹ ಅವರಿಂದ ನೀಡಲಾಯಿತು.
ಅದರಂತೆ ಉತ್ನಾಳ ಎಲ್‍ಟಿ 2 ರಲ್ಲಿ ಕೊರೊನಾ ಪಾಸಿಟಿವ್ ಆದವರ ಮನೆಗೆ ಭೇಟಿ ನೀಡಿ ವಿಚಾರಿಸಿ, ಕುಟುಂಬದಲ್ಲಿ ಪಾಸಿಟಿವ್ ಆದವರು ನೆಗೆಟಿವ್ ಇರುವ ಸದಸ್ಯರನ್ನು ಬಿಟ್ಟು ಪ್ರತ್ಯೇಕ ಕೋಣೆಯಲ್ಲಿ ವಾಸಿಸುವಂತೆ ಅವರು ತಿಳಿಹೇಳಿದ್ದಾರೆ.