ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ:ಜಿಲ್ಲಾಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದ ಪ್ರತಿಭಟನಾಕಾರರು

ಅಫಜಲಪುರ:ಮಾ.20: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 5 ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಿ ಯುವ ಮುಖಂಡ ಶಿವಕುಮಾರ್ ನಾಟೀಕಾರ ಹಮ್ಮಿಕೊಂಡ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ಹೆಚ್ಚುವರಿ ಎಸ್.ಪಿ ಎನ್ ಶ್ರೀನಿಧಿ, ಡಿ.ವೈ.ಎಸ್.ಪಿ ಮೊಹಮ್ಮದ್ ಶರೀಷ್ ರಾವುತರ್, ತಹಸೀಲ್ದಾರ ಸಂಜೀವಕುಮಾರ ದಾಸರ ಭೇಟಿ ನೀಡಿದರು.

ಈ ವೇಳೆ ಪ್ರತಿಭಟನಕಾರರು ಮಾತನಾಡಿ, ಕಳೆದ ಐದಾರು ದಿನಗಳಿಂದ ನಾವು ಧರಣಿ ಸತ್ಯಾಗ್ರಹ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯಾವುದೇ ಆಶ್ವಾಸನೆ ಮತ್ತು ಭರವಸೆ ನಮಗೆ ನೀಡಿಲ್ಲ. ಹೀಗಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳನ್ನು ತಾವು ಕರೆಸಬೇಕು ಎಂದು ಪಟ್ಟು ಹಿಡಿದರು.

ನಂತರ ಮಾತನಾಡಿದ ಅಧಿಕಾರಿಗಳು, ಈಗಾಗಲೇ ಈ ವಿಷಯ ಸರ್ಕಾರ ಮತ್ತು ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೀಗಾಗಿ ಈ ಉಪವಾಸ ಸತ್ಯಾಗ್ರಹವನ್ನು ಕೈ ಬಿಡಬೇಕು ಮತ್ತು ನಿಮ್ಮೊಂದಿಗೆ ಸರ್ಕಾರ ಮತ್ತು ಅಧಿಕಾರಿಗಳು ಇದ್ದಾರೆ ಎಂದು ಧರಣಿ ನಿರತ ಹೋರಾಟಗಾರರಲ್ಲಿ ಆತ್ಮಸ್ಥೈರ್ಯ ತುಂಬಿದರು.