ಉಪವಾಸ ಕೈಬಿಡಿ ಶ್ರೀಗಳಿಗೆ ಬಿಎಸ್‌ವೈ ಮನವಿ

Minister cc patil yathanal speaking during protest by Jaya muthrijaya swamji at freedom park


ಬೆಂಗಳೂರು, ಮಾ. ೧೫- ವೀರಶೈವ ಲಿಂಗಾಯತ ಪಂಚಮಸಾಲಿ ಸಮು ದಾಯದ ೨ಎ ಸೇರ್ಪಡೆ ಬೇಡಿಕೆ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿದ್ದು, ಇನ್ನಾರು ತಿಂಗಳಲ್ಲಿ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದರು.
ಇಂದು ಸದನ ಆರಂಭವಾಗು ತ್ತಿದ್ದಂತೆಯೇ ಬಿಜೆಪಿಯ ಬಸನ ಗೌಡಪಾಟೀಲ್ ಯತ್ನಾಳ್ ಅವರು ವಿಷಯ ಪ್ರಸ್ತಾಪಿಸಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮು ದಾಯವನ್ನು ೨ಎ ಸೇರ್ಪಡೆಗೆ ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರು ಅಮರಣಾಂತರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸರ್ಕಾರ ಈ ಬಗ್ಗೆ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದರು.
ಯತ್ನಾಳ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು, ಈ ವಿಚಾರವನ್ನು ಪ್ರಶ್ನೋತ್ತರ ನಂತರ ತೆಗೆದುಕೊಳ್ಳಬಹುದಿತ್ತು. ಏನೇ ಆಗಲಿ ಸದನದಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ. ಸ್ವಾಮೀಜಿಗಳು ಉಪವಾಸವನ್ನು ಕೈಬಿಡಬೇಕು. ಸರ್ಕಾರ ಮೀಸಲಾತಿ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ೨ಎ ಸೇರ್ಪಡೆ ಸಂಬಂಧ ಈಗಾಗಲೇ ನಿವೃತ್ತ ನ್ಯಾ. ನೇತೃತ್ವದಲ್ಲಿ ಸಮಿತಿ ರಚಿಸಿದ್ದವೆ. ಹಾಗೆಯೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದಲೂ ವರದಿ ಕೇಳಿದ್ದೇವೆ. ಈ ಎರಡೂ ವರದಿಗಳನ್ನು ಆಧರಿಸಿ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದರು.
ಇನ್ನಾರು ತಿಂಗಳೊಳಗೆಈ ವರದಿಗಳನ್ನು ತರಿಸಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ವಿವಿಧ ವರ್ಗಗಳ ಮೀಸಲಾತಿ ಬೇಡಿಕೆಗೆ ನ್ಯಾಯ ಒದಗಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.
ಮುಖ್ಯಮಂತ್ರಿಗಳ ಉತ್ತರದ ನಂತರ ಮತ್ತೆ ಮಾತು ಮುಂದುವರೆಸಿದ ಯತ್ನಾಳ್ ನಿವೃತ್ತ ನ್ಯಾ., ಸಮಿತಿಗೆ ಕಾನೂನಿನ ಮಾನ್ಯತೆ ಇಲ್ಲ. ಹಾಗಾಗಿ ಶಾಶ್ವತ ಹಿಂದುಳಿದ ವರ್ಗಗಳಿಂದ ಆದಷ್ಟು ಬೇಗ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.
ಆಗ ಮಧ್ಯಪ್ರವೇಸಿಸಿ ಮಾತನಾಡಿದ ಗೃಹ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜಬೊಮ್ಮಾಯಿ, ಮುಖ್ಯಮಂತ್ರಿಗಳು ಈಗಾಗಲೇ ಕಾನೂನಿನ ಚೌಕಟ್ಟಿನಲ್ಲಿ ಇನ್ನಾರು ತಿಂಗಳಲ್ಲಿ ವರದಿ ತರಿಸಿಕೊಂಡು ಪಂಚಮಸಾಲಿ ಸಮುದಾಯದ ೨ಎ ಸೇರ್ಪಡೆ ಸಂಬಂಧ ನ್ಯಾಯಸಮ್ಮತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸ್ಪಷ್ಟ ಭರವಸೆ ನೀಡಿದ್ದರೂ ಮತ್ತೆ ಇದನ್ನೇ ಮತ್ತೆ ಮತ್ತೆ ಮಾತನಾಡುವುದು ಬೇಡ ಯತ್ನಾಳ್ ಅವರು ಸಹಕರಿಸಬೇಕು ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅವರು ಮುಖ್ಯಮಂತ್ರಿಗಳು ನಿಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದನದಲ್ಲಿ ಒಂದು ಸ್ಪಷ್ಟ ಉತ್ತರ ನೀಡಿದ್ದಾರೆ ಯತ್ನಾಳ್ ಅವರೇ ಸಹಕರಿಸಿ ಎಂದು ಹೇಳಿದರು.
ಆಗ ಯತ್ನಾಳ್ ಅವರು ಮುಖ್ಯಮಂತ್ರಿಗಳು ಇನ್ನಾರು ತಿಂಗಳಲ್ಲಿ ವರದಿ ತರಿಸಿಕೊಳ್ಳುವಲ ಭವರಸೆ ನೀಡಿದ್ದಕ್ಕೆ ಅವರನ್ನು ಅಭಿನಂದಿಸುತ್ತೇನೆ. ಸ್ವಾಮೀಜಿಗಳು ಸಹ ತಮ್ಮ ಹೋರಾಟವನ್ನು ಆರು ತಿಂಗಳು ಸ್ಥಗಿತಗೊಳಿಸಬೇಕು.
ಸರ್ಕಾರದ ತೀರ್ಮಾನ ನೋಡಿಕೊಂಡು ಮುಂದೆ ಸೂಕ್ತ ತೀರ್ಮಾನ ಮಾಡೋಣ ಎಂದು ಸದನದ ಮೂಲಕ ಕೂಡಲ ಸಂಗಮದಜಯಮೃತ್ಯುಂಜಯ ಸ್ವಾಮೀಜಿಗೆ ಮನವಿ ಮಾಡುವುದಾಗಿ ಹೇಳಿ, ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸದನದ ಮೂಲಕ ಸ್ವಾಮೀಜಿಗಳು ಹೋರಾಟ ಕೈಬಿಡುವಂತೆ ಮನವಿ ಮಾಡೋಣ ಎಂದು ವಿಧಾನಸಭಾಧ್ಯಕ್ಷರು ಹೇಳಿ, ಪಂಚಮಸಾಲಿ ಮೀಸಲಾತಿಯ ವಿಷಯಕ್ಕೆ ತೆರೆ ಎಳೆದರು.