ಉಪರಾಷ್ಟ್ರಪತಿಗಳ ಕುರಿತು ಮಿಮಿಕ್ರಿ: ಕಾಂಗ್ರೆಸ್ಸಿಗರ ವಿರುದ್ಧ ಬಿಜೆಪಿ ಪ್ರತಿಭಟನೆ

ಕಲಬುರಗಿ:ಡಿ.21: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಮಿಮಿಕ್ರಿ ಮೂಲಕ ಅವಮಾನಿಸುವ ದೃಶ್ಯಾವಳಿಯನ್ನು ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್‍ಗಾಂಧಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ಮಾಡಿದರು.
ಬಿಜೆಪಿ ಪಕ್ಷದ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ರಾಹುಲ್‍ಗಾಂಧಿ ವಿರುದ್ಧ ಧಿಕ್ಕಾರ ಹಾಕಿದರು. ಭೋಲೋ ಭಾರತ್ ಮಾತಾಕೀ ಜೈ ಎಂದು ಘೋಷಣೆ ಹಾಕಿದರು.
ಈ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್ ಅವರು ಮಾತನಾಡಿ, ಇಡೀ ಸಂಸದೀಯ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿದೆ. ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸದೇ ಸದನದಲ್ಲಿ ಸರಿಯಾಗಿ ವರ್ತಿಸದೇ ಇದ್ದುದರಿಂದ ಅವರಿಗೆ ಅಮಾನತ್ತುಗೊಳಿಸಿದ್ದು, ಅವರೆಲ್ಲ ಸಂಸತ್ ಆವರಣಕ್ಕೆ ಬಂದು ಉಪರಾಷ್ಟ್ರಪತಿ ಧನಕರ್ ಅವರ ಕುರಿತು ಅತ್ಯಂತ ಅವಹೇಳನಕಾರಿ ಟ್ವೀಟ್‍ನ್ನು ರಾಹುಲ್‍ಗಾಂಧಿ ಮಾಡಿದರು ಎಂದು ಆಕ್ರೋಶ ಹೊರಹಾಕಿದರು.
ಜಾಟ್ ಸಮುದಾಯಕ್ಕೆ ಸೇರಿದ ಮಹಾನ್ ವ್ಯಕ್ತಿ ಉಪರಾಷ್ಟ್ರಪತಿಗಳ ಕುರಿತು ಕಾಂಗ್ರೆಸ್ಸಿನ ಪರಮೋಚ್ಛ ನಾಯಕ ರಾಹುಲ್‍ಗಾಂಧಿ ಅವರು ಅವಹೇಳನ ಮಾಡಿದ್ದನ್ನು ಹೆಚ್ಚು ಪ್ರಚಾರ ಕೊಟ್ಟಿದ್ದು ಖಂಡನಾರ್ಹ. ಕಾಂಗ್ರೆಸ್ ಪಕ್ಷಕ್ಕೆ ಇದು ಶೋಭೆ ತರುವಂತಹುದಲ್ಲ. ಸಾಂವಿಧಾನಿಕ ಅತ್ಯಂತ ದೊಡ್ಡ ಹುದ್ದೆಯಲ್ಲಿರುವ ಉಪರಾಷ್ಟ್ರಪತಿಗಳ ಅವಮಾನವನ್ನು ನಾವು ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಬಿಜೆಪಿ ಪಕ್ಷದ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ರಾಜ್ಯ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್, ಲಿಂಗರಾಜ್ ಬಿರಾದಾರ್, ಸಂತೋಷ್ ಹಾದಿಮನಿ, ಶರಣು ಸಜ್ಜನ್, ರಾಜು ನಾಗನಳ್ಳಿ, ಶಿವಯೋಗಿ ನಾಗನಳ್ಳಿ, ಮಲ್ಲು ಉದನೂರ್, ಆನಂದ್ ಕಣಸೂರ್, ಮಹೇಶ್, ಮಂಜುನಾಥ್, ಮಹಾದೇವಿ ಕೆಸರಟಗಿ, ದತ್ತು ಡಾಲರೆ ಮುಂತಾದವರು ಪಾಲ್ಗೊಂಡಿದ್ದರು.