ಉಪಯೋಗಕ್ಕಿಲ್ಲದ ಉಧ್ಯಾನವನ: ಮುಖ್ಯ ಗೇಟಿನಲ್ಲೆ ಶೌಚಾಲಯ

ಹನೂರು ಜು.29:- ಪಟ್ಟಣದ ಪ್ರಮುಖ ಸರ್ಕಾರಿ ಕಚೇರಿಗಳಿಗೆ ತೆರಳುವ ಮುಖ್ಯ ಗೇಟಿನಲ್ಲೇ ಶೌಚಾಲಯ ನಿರ್ಮಾಣ ಮತ್ತು ಇಡೀ ಪಟ್ಟಣಕ್ಕೆ ಸರಬರಾಜಾಗುವ ಬೃಹತ್ ಕುಡಿಯುವ ನೀರು ದಾಸ್ತಾನು ಟ್ಯಾಂಕ್‍ಗಳು ಹಾಗೂ ಕಿಷ್ಕಿಂಧತೆಯಿಂದ ಕೂಡಿರುವ ಗೇಟ್‍ವಾಲ್‍ಗಳ ಸುತ್ತ ಉಧ್ಯಾನವನದ ಹೆಸರಿನ ಅಧ್ವಾನವನ ನಿರ್ಮಾಣ ಮಾಡುವ ಮೂಲಕ ಯೋಜನೆಯ ಉದ್ದೇಶ ಈಡೇರದಿದ್ದರೂ ಸರ್ಕಾರದ ಹಣ ಲೂಟಿ ಮಾಡಲು ನಡೆಸಿರುವ ಹುನ್ನಾರ ತೀವ್ರ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.
ಪಟ್ಟಣದ ತಹಸೀಲ್ದಾರ್ ಕಚೇರಿ ಸಮೂಹ, ಅತಿಗಣ್ಯರ ಅತಿಥಿಗೃಹ, ಅಂಗನವಾಡಿ ಕೇಂದ್ರ, ಪಶು ವೈದ್ಯಾಧಿಕಾರಿಗಳ ಕಚೇರಿ, ವಿದ್ಯಾರ್ಥಿನಿಯರ ಹಾಸ್ಟೆಲ್‍ಗಳಿಗೆ ತೆರಳುವ ಮುಖ್ಯ ಕೆಶಿಪ್ ರಸ್ತೆಯಲ್ಲೇ ಬರುವ ಪ್ರವೇಶ ದ್ವಾರದಲ್ಲಿನ ಗೇಟ್‍ನ ಎಡ ಭಾಗಕ್ಕೆ ಹೊಂದಿಕೊಂಡಂತೆ ಪಟ್ಟಣ ಪಂಚಾಯ್ತಿಯ 2017-18 ನೇ ಸಾಲಿನ 14 ನೇ ಹಣಕಾಸು ಆಯೋಗದ ಅನುದಾನದ 3 ಲಕ್ಷದ 50 ಸಾವಿರ ರೂಗಳ ಅಂದಾಜು ವೆಚ್ಚದಲ್ಲಿ ನಡೆಸಿರುವ ಶೌಚಾಲಯ ಕಾಮಗಾರಿಯು ಅವ್ಶೆಜ್ಞಾನಿಕ ಹಾಗೂ ಕಳಪೆಯಿಂದ ಕೂಡಿದೆ.
ಉಗುಳು ಉಗಿದು ಕಬ್ಬು ನೆಟ್ಟಂತೆ' ಒಂದೆಡೆ ಕಾಟಾಚಾರಕ್ಕೆ ಕಡಿಮೆ ಆಳದ ಅದಿಪಾಯ ತೆಗೆದು ಕಟ್ಟಡದ ಹೆಸರಿನ ಕಳಪೆ ಕಾಮಗಾರಿ ನಡೆಸಿದ್ದರೆ ಮತ್ತೊಂದೆಡೆ ಸರ್ಕಾರಿ ಕಚೇರಿಗಳಿಗೆ ತೆರಳುವ ಸಾರ್ವಜನಿಕರನ್ನು ಆರಂಭದಲ್ಲೇ ಈ ಶೌಚಾಲಯ ಸ್ವಾಗತಿಸುವುದರ ಜತೆಗೆ ಇದರ ಎದುರಿಗೆ ಇರುವ ವಿದ್ಯಾರ್ಥಿ ನಿಲಯದ ಹೆಣ್ಣು ಮಕ್ಕಳು ಹೊರ ಬರಲು ಹಿಂದೆ ಮುಂದೆ ನೋಡಿ ಇರುಸು ಮುರುಸು ಅನುಭವಿಸುವ ಹೀನಾಯ ಸ್ಥಿತಿ ಉಂಟಾಗಿದೆ. ಸಾಮಾನ್ಯವಾಗಿ ಯಾವುದೇ ಸರ್ಕಾರಿ ಕಚೇರಿಗಳಿರುವ ಸಮೂಹದಲ್ಲಿ ಕಚೇರಿಗಳ ಹಿಂಭಾಗದಲ್ಲಿ ಸ್ವಲ್ಪವಾದರೂ ತೆರೆ ಮರೆಯಲ್ಲಿರುವ ಸ್ಥಳದಲ್ಲಿ ಶೌಚಾಲಯ ನಿರ್ಮಿಸುವುದು ವಾಡಿಕೆ ಹಾಗೂ ಸೂಕ್ತ. ಆದರೆ ಅದರಲ್ಲೂ ರಾಷ್ಟ್ರೀಯ ಕೆಶಿಫ್ ಹೆದ್ದಾರಿ ಹಾದು ಹೋಗುವ ಮುಖ್ಯ ರಸ್ತೆಯ ಮುಂದೆಯೇ ಇರುವ ಪ್ರವೇಶ ದ್ವಾರದಲ್ಲೇ ಶೌಚಾಲಯ ನಿರ್ಮಿಸಿರುವುದು ಸರ್ಕಾರಿ ಕಚೇರಿಗಳಿಗೆ ಆಗಮಿಸುವವರಲ್ಲಿ ಅಸಹನೆ ಮೂಡಿಸುವಂತಾಗಿದೆ. ಉಳಿದಂತೆ ಹಾಲಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಎರಡು ಬೃಹತ್ ದಾಸ್ತಾನು ಟ್ಯಾಂಕ್‍ಗಳು ಹಾಗೂ ಈ ಟ್ಯಾಂಕ್‍ಗಳಿಂದ ನೀರು ಸರಬರಾಜು ಮಾಡಲು ಬಳಸುವ 8 ಗೇಟ್ ವಾಲ್‍ಗಳುಳ್ಳ ಎರಡು ದೊಡ್ಡ ಗುಂಡಿಗಳ ಸುತ್ತಲೂ ಇರುವ ಕಿಷ್ಕಿಂಧತೆಯಿಂದ ಕೂಡಿರುವ ಕಿರಿದಾದ ಸ್ಥಳದಲ್ಲಿ ಪಟ್ಟಣ ಪಂಚಾಯ್ತಿಯ 2020-21 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿ 4.69 ಲಕ್ಷ ಅಂದಾಜು ವೆಚ್ಚದಲ್ಲಿ ಕಡಿಮೆ ಆಳ ತೆಗೆದು ಕಿರು ಸುತ್ತುಗೊಡೆ ಮೇಲೆ ತಂತಿ ಬೇಲಿ ನಿರ್ಮಿಸಿ ಒಳಗೆ ಸುತ್ತಲೂ ಗಿಡಗಳನ್ನು ನೆಡಲು ಸಿಮೆಂಟ್ ಟೈಲ್ಸ್‍ಗಳನ್ನು ಅಳವಡಿಸಿ ಕಡಿಮೆ ವೆಚ್ಚದಲ್ಲಿ ಕಾಟಾಚಾರದ ಕಾಮಗಾರಿ ಶಾಸ್ತ್ರ ನಡೆಸಿರುವುದು ಉಧ್ಯಾನವನದ ಹೆಸರಿನ ಅಧ್ವಾನವನವೇ ಹೊರತು ಇದರಿಂದ ಸಾರ್ವಜನಿಕರಿಗೆ ಯಾವುದೇ ಉಪಯೋಗವಿಲ್ಲದಂತಾಗಿರುವುದು ವಿಪರ್ಯಾಸವೇ ಸರಿ. ಇದು ಕುಡಿಯುವ ನೀರು ದಾಸ್ತಾನು ಟ್ಯಾಂಕ್‍ಗಳಿಗೆ ಸಂರಕ್ಷಣಾ ತಂತಿ ಬೇಲಿಯೇ’ ಹೊರತು ಯಾವ ಮಾನದಂಡದಲ್ಲಿ ಉಧ್ಯಾನವಾಗಿದೆಯೋ ಅದಕ್ಕೆ ಯೋಜನೆ ರೂಪಿಸಿದ ಮಹಾನುಭಾವರೇ ಉತ್ತರಿಸಬೇಕಿದೆ..? ಹಾಲಿ ಕಡಿಮೆ ಅಂತರವಿರುವ ಸ್ಥಳದಲ್ಲಿ ನೀರು ದಾಸ್ತಾನು ಟ್ಯಾಂಕ್‍ಗಳು ಹಾಗೂ ನೀರು ಪೂರೈಕೆಯ ಸಾಧನೆಗಳೇ ಅತಿ ಹೆಚ್ಚಿನ ಸ್ಥಳವನ್ನು ಆಕ್ರಮಿಸಿಕೊಂಡಿರುವುದರಿಂದ ಇನ್ನೂ ಸಾರ್ವಜನಿಕರು ಯಾವ ರೀತಿ ಇಲ್ಲಿ ವಿಶ್ರಾಂತಿ ಪಡೆಯಲು ಬರುತ್ತಾರೋ ನಿರ್ಮಾತೃದಾರರೇ ನಿರ್ಧರಿಸಬೇಕಿದೆ. ಈ ಟ್ಯಾಂಕ್‍ಗಳು ಹಳೆಯದಾಗಿದ್ದು ಬಿದ್ದು ಅವಘಡ ಸಂಭವಿಸಿದರೆ ಯಾರು ಹೊಣೆ..? ಹತ್ತಾರು ಜನರೂ ಕೂರಲಾರದಷ್ಟು ಸಂಚರಿಸಲಾರದಷ್ಟೂ ಕಿರಿದಾದ ಈ ಸ್ಥಳದಲ್ಲಿ ಉಧ್ಯಾನವನ ನಿರ್ಮಿಸಿರುವುದರ ಔಚಿತ್ಯವಾದರೂ ಏನು..?
ಅಭಿವೃದ್ದಿ ಕಾಮಗಾರಿಗಳ ನೆಪದಲ್ಲಿ ಕೇವಲ ಹಣ ಲೂಟಿ ಮಾಡಲು ನಡೆಸಿರುವ ಹುನ್ನಾರವೇ ಹೊರತು ನಾಗರೀಕರಿಗೆ ಸೌಲಭ್ಯ ಕಲ್ಪಿಸುವ ಯಾವುದೇ ಇರಾದೆ ಇಲ್ಲದಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದ್ದು ಈ ಅಕ್ರಮದ ವಿರುದ್ದ ಜಿಲ್ಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕಾಗಿದೆ.