ಉಪಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಬಂಧನ ಖಂಡನೀಯ

ರಾಯಚೂರು, ಫೆ.೨೮- ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಅವರನ್ನು ಬಂಧಿಸಿರುವುದು ಖಂಡನೀಯ ಎಂದು ಆಮ್ ಆದ್ಮಿ ಪಾರ್ಟಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಬಸವರಾಜ ಗುತ್ತೇದಾರ್ ಹೇಳಿದರು.
ಅವರಿಂದು ನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ದೇಶಾದ್ಯಂತ ಆಮ್ ಆದ್ಮಿ ಪಕ್ಷ ಬೆಳೆಯುತ್ತಿರುವುದನ್ನು ಕಂಡು ಹೆದರಿರುವ ಕೇಂದ್ರ ಬಿಜೆಪಿ ಸಿಸೋದಿಯಾರವರನ್ನು ಬಂಧಿಸಿದೆ ಎಂದ ಅವರು,ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ನೂತನ ಅಬಕಾರಿ ನೀತಿಯನ್ನು ದೆಹಲಿಯಲ್ಲಿ ಇನ್ನೂ ಜಾರಿಗೆ ತಂದಿಲ್ಲ ಹಾಗೂ ಹಲವು ರಾಜ್ಯಗಳಲ್ಲಿ ಇದೇ ನೀತಿ ಜಾರಿಯಲ್ಲಿದೆ ಎಂದರು.
ಕೇಂದ್ರ ಸರ್ಕಾರ ಸುಮಾರು ಒಂದು ವರ್ಷದಿಂದ ತನಿಖಾಧಿಕಾರಿಗಳಿಂದ ಸಿಸೋದಿಯಾ ಅವರ ಮೇಲೆ ದಾಳಿ ನಡೆಸಿದರೂ ಯಾವುದೇ ಸಣ್ಣ ಸಾಕ್ಷಿ ಕೂಡ ಸಿಕ್ಕಿಲ್ಲ.ನಗದು ಅಥವಾ ಯಾವುದೇ ಅಕ್ರಮ ದಾಖಲೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆಮ್ ಆದ್ಮಿ ಪಕ್ಷ ಒಂದು ಬಿಜೆಪಿಯನ್ನು ಎದುರಿಸುವ ಏಕೈಕ ಶಕ್ತಿ ಎಂಬುದನ್ನು ಅರಿತು ನಮ್ಮನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ಸೇರಿದಂತೆ ದೇಶಾದ್ಯಂತ ಆಮ್ ಆದ್ಮಿ ಪಾರ್ಟಿ ಪ್ರವರ್ಧಮಾನಕ್ಕೆ ಬರುತ್ತಿದೆ. ಜನರು ಎಎಪಿ ಪರವಾಗಿ ಇರುವುದನ್ನು ಸಹಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಮನೀಷ್ ಸಿಸೋದಿಯಾ ಆಗಮಿಸಿ, ಇಲ್ಲಿನ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಪ್ರಶ್ನಿಸಬಹುದು ಎಂಬ ಭಯದಿಂದ ಕೇಂದ್ರ ಸರ್ಕಾರವು ಸಿಬಿಐ ಮೂಲಕ ಅವರನ್ನು ಬಂಧಿಸಿದೆ.ದೇಶ ಹಾಗೂ ಜನರಿಗೋಸ್ಕರ ಕೇವಲ ಬಂಧನ ಮಾತ್ರವಲ್ಲ, ಪ್ರಾಣ ನೀಡಲೂ ಸಿದ್ಧವಿದ್ದೇವೆ.
ಶಿಕ್ಷಣ ಸಚಿವರಾಗಿ ಮನೀಷ್ ಸಿಸೋದಿಯಾರವರು ಬರೋಬ್ಬರಿ ೨೫,೦೦೦ಕ್ಕೂ ಶಾಲಾ ಕೊಠಡಿಗಳನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಸುಮಾರು ೨೦ ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಇಂತಹವರ ವಿರುದ್ಧ ಬಿಜೆಪಿಯು ಈ ರೀತಿ ಕೀಳುಮಟ್ಟದ ಕುತಂತ್ರ ಮಾಡುತ್ತಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ವಿಧಾನಸಭಾ ಅಭ್ಯರ್ಥಿ ಸುಭಾಷಚಂದ್ರ ಸಂಭಾಜಿ ,ಪೂಜಾ ರಮೇಶ,ವೀರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.