ಉಪನ್ಯಾಸ: ಕೃತಿ ಬಿಡುಗಡೆ

ಧಾರವಾಡ,ಅ29: ಚನ್ನಪ್ಪ ಎಂಬ ಹೆಸರಿನಲ್ಲಿಯೇ ರೆ. ಚನ್ನಪ್ಪ ಉತ್ತಂಗಿಯವರ ವ್ಯಕ್ತಿತ್ವ ಅಡಗಿದೆ. ಇವರ ಪೂರ್ವಜರು ಲಿಂಗಾಯತರಾದರೂ ಎರಡು ತಲೆಮಾರಿನಿಂದ ಕ್ರೈಸ್ತ ಧರ್ಮವನ್ನು ಸ್ವೀಕರಿಸಿ, ಕಾರ್ಯ ಪ್ರವೃತ್ತರಾದವರು ರೆ. ಉತ್ತಂಗಿ ಚೆನ್ನಪ್ಪನವರು ಎಂದು ಧಾರವಾಡ ಹೆಬಿಕ್ ಸ್ಮಾರಕ ಚರ್ಚನ ರೆವರೆಂಡ್ ಸಮುವೇಲ್ ಕಾಲ್ವಿನ್ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ರೆ. ಉತ್ತಂಗಿ ಚನ್ನಪ್ಪ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಕ್ರೈಸ್ತ ಸಾಹಿತ್ಯ’ ವಿಷಯ ಕುರಿತು ಉಪನ್ಯಾಸ ಹಾಗೂ ರೆವರೆಂಡ್ ಚನ್ನಪ್ಪ ಉತ್ತಂಗಿ (ಜೀವನಚರಿತ್ರೆ) ಮರಾಠಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಸರ್ವಜ್ಞ ಕವಿಯನ್ನು ನಾಡಿಗೆ ಸಮಗ್ರವಾಗಿ ಪರಿಚಯಿಸಿಕೊಟ್ಟವರು ಚನ್ನಪ್ಪನವರು. ಇವರು ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದರು. ತಾಯಿಯ ಅಪೇಕ್ಷೆಯಂತೆ ಕ್ರೈಸ್ತ ಧರ್ಮದ ಗುರುವಾದವರು. ಅಪಾರವಾದ ದೇಶಾಭಿಮಾನ, ರಾಜ್ಯಾಭಿಮಾನ ಹೊಂದಿದ್ದ ಇವರು ಧರ್ಮಗ್ರಂಥಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಿ, ಸಾಹಿತ್ಯಿಕ ಕೃಷಿಯೊಂದಿಗೆ ಪಾದ್ರಿಯಾಗಿ ಧರ್ಮ ಪ್ರಚಾರಕ್ಕೆ ತೊಡಗುತ್ತಾರೆ.
ಸಾಧಕನಿಗೆ ಸಾವಿಲ್ಲ ಎನ್ನುವಂತೆ ಅನೇಕ ಅಡೆತಡೆಗಳ, ಅಸಮಾನತೆಯ ಗೊಂದಲಗಳ ಮಧ್ಯದಲ್ಲಿ ಅವ್ಯಾವುದರ ಸುಳಿಗೆ ಸಿಲುಕದೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಅನೇಕ ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಗ್ರಂಥಾಲಯ ವಿಜ್ಞಾನಿ ಡಾ. ಎಸ್. ಆರ್. ಗುಂಜಾಳ ಮಾತನಾಡಿ, ಉತ್ತಂಗಿ ಚನ್ನಪ್ಪನವರನ್ನು ನೆನಪು ಮಾಡಿಕೊಳ್ಳುವುದೇ ಒಂದು ಸಡಗರ, ಸಂಭ್ರಮ. ಕ್ರಿಸ್ತನ ಬಗ್ಗೆ ಭಕ್ತಿ, ಅಪಾರವಾದ ಪ್ರೀತಿ, ಗೌರವವನ್ನು ಇಟ್ಟುಕೊಂಡವರು. ಅವರು ರಚಿಸಿದ ಅನೇಕ ಕೃತಿಗಳು ಮರುಮುದ್ರಣಗೊಂಡಿರುವುದು ಹೆಮ್ಮೆ ಪಡುವ ಸಂಗತಿಯಾಗಿದೆ. ಗಾಂಧೀಜಿಯವರ ಬಗ್ಗೆ ಅಪಾರ ಪ್ರೀತಿ, ಗೌರವವನ್ನು ಇಟ್ಟುಕೊಂಡಿದ್ದ ಇವರು, ಹÁವೇರಿಯ ಸಮೀಪದ ಕನವಳ್ಳೆ ಗ್ರಾಮದ ಹರಿಜನಕೇರಿಯ ಜನರಿಗೆ ಶಿಕ್ಷಣವನ್ನು ನೀಡಿದ್ದಲ್ಲದೆ ಆ ಗ್ರಾಮದಲ್ಲಿ ಸಾಮರಸ್ಯ ಇರುವಂತೆ ನೋಡಿಕೊಂಡಿದ್ದರು.
ವಚನ ಸಂಪುಟ, ಕ್ರಿಸ್ತ ಸಂಪುಟ, ವೀರಶೈವ ಸಂಪುಟ, ಸರ್ವಜ್ಞ ವಚನ ಸಂಪುಟ ಹಾಗೂ ಸಂಕೀರ್ಣ ಸಂಪುಟಗಳು ಎಂಬ ಐದು ಸಂಪುಟಗಳಲ್ಲಿ ಅವರ ಸಮಗ್ರ ಸಾಹಿತ್ಯವನ್ನು ಮೈಸೂರಿನ ಸಂವಹನ ಪ್ರಕಾಶನದವರು ಪ್ರಕಟಪಡಿಸಿದ್ದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.
ಲೇಖಕಿ ಪ್ರೊ. ಶಾಲಿನಿ ಎಸ್. ದೊಡಮನಿ ಹಾಗೂ ಪ್ರಕಾಶ ಗಿರಿಮಲ್ಲನವರ ಮಾತನಾಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು. ಹೆಬಿಕ್ ಸ್ಮಾರಕ ಚರ್ಚ, ಧಾರವಾಡ ಯುವಕರು ಪ್ರಾರ್ಥನೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಶ್ರೀಶೈಲ ಹುದ್ದಾರ, ಡಾ. ಜಿನದತ್ತ ಹಡಗಲಿ, ಸಮವೇಲ್ ಸಕ್ರಿ, ವಿಲ್ಸನ್ ಮೈಲಿ, ಪ್ರೊ. ಎಸ್. ವಿ. ಅಯ್ಯನಗೌಡರ, ಪ್ರಕಾಶ ಹುಗ್ಗಿ, ದೇವದಾನ ದೊಡಮನಿ, ಜಿ. ಬಿ. ಹೊಂಬಳ. ಡಾ. ಸುರೇಶ ಹೊರಕೇರಿ, ಎಂ.ಎಂ. ಚಿಕ್ಕಮಠ ದಂಪತಿಗಳು, ವೀರೇಶ ಜಾಲಿಕಟ್ಟಿ, ಪ್ರಕಾಶ ಗಿರಿಮಲ್ಲನವರ ಸೇರಿದಂತೆ ಅನೇಕರು ಭಾಗವಹಿಸಿದ್ದರು.