ಬೀದರ್:ಜು.24: ಅರ್ಹ ಪ್ರೌಢಶಾಲಾ ಶಿಕ್ಷಕರಿಗೆ ಪದವಿಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಆಗ್ರಹಿಸಿದೆ.
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ನಿಯೋಗದಲ್ಲಿ ಅರಣ್ಯ, ಪರಿಸರ, ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಬಡ್ತಿ ಹೊಂದಿರುವ ಪ್ರೌಢಶಾಲಾ ಸಹ ಶಿಕ್ಷಕರಿಗೆ 10, 15, 20 ವರ್ಷಗಳ ಕಾಲ ಮಿತಿ/ಸ್ವಯಂ ಚಾಲಿತ ವೇತನ ಬಡ್ತಿ ಕೊಡಬೇಕು. ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ಖಾಲಿ ಹುದ್ದೆ ಕೂಡಲೇ ಭರ್ತಿ ಮಾಡಬೇಕು. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಿ, ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರೌಢಶಾಲಾ ಶಿಕ್ಷಕರ ಸಂಘಕ್ಕೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನಿವೇಶನ ಒದಗಿಸಿ, ಕಟ್ಟಡ ನಿರ್ಮಿಸಿಕೊಡಬೇಕು. ಕಟ್ಟಡ ನಿರ್ಮಿಸುವವರೆಗೆ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ಕಟ್ಟಡದಲ್ಲಿ ಸಂಘದ ತಾತ್ಕಾಲಿಕ ಕಚೇರಿ ಆರಂಭಿಸಲು ಅವಕಾಶ ಕಲ್ಪಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶೇಕ್ ಮಹೆಬೂಬ್ ಪಟೇಲ್, ಪ್ರಧಾನ ಕಾರ್ಯದರ್ಶಿ ಜೀತೇಂದ್ರ ಹಾಲಹಿಪ್ಪರ್ಗಾ, ಶಂಕರ ಬಾಪುರೆ, ಸಿದ್ದಮ್ಮ, ಸಂತೋಷಕುಮಾರ ಚಲುವಾ, ಸುಧಾರಾಣಿ, ಪುಷ್ಪಾವತಿ, ಮಿಲಿಂದ್ ಇದ್ದರು.