ಉಪನ್ಯಾಸಕರಿಗೆ ಗುಲಾಬಿ ಹೂ ನೀಡಿದ ರೋಟರಿ ಪದಾಧಿಕಾರಿಗಳು

ಬೀದರ್:ಸೆ.6: ನಗರದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೀದರ್ ಫೋರ್ಟ್ ಪದಾಧಿಕಾರಿಗಳು ಉಪನ್ಯಾಸಕರಿಗೆ ಗುಲಾಬಿ ಹೂ ಕೊಟ್ಟು ಶಿಕ್ಷಕರ ದಿನದ ಶುಭ ಕೋರಿದರು.

ಗುರುವಿಗೆ ಗೌರವಿಸಿ: ಅಕ್ಷರ ಕಲಿಸುವ ಗುರುವಿನ ಸ್ಥಾನ ಶ್ರೇಷ್ಠವಾಗಿದೆ. ಪ್ರತಿಯೊಬ್ಬರೂ ಗುರುವನ್ನು ಗೌರವಿಸಬೇಕು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಕ್ಲಬ್ ಬೀದರ್ ಫೋರ್ಟ್ ನಿಕಟಪೂರ್ವ ಅಧ್ಯಕ್ಷ ಪ್ರೊ. ಎಸ್.ಬಿ. ಚಿಟ್ಟಾ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವಿಜಯಕುಮಾರ ಬಿರಾದಾರ ಮಾತನಾಡಿ, ಸದೃಢ ರಾಷ್ಟ್ರ, ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರ ಮಾರ್ಗದರ್ಶನದಿಂದ ಮಾತ್ರ ಉನ್ನತ ಸ್ಥಾನ ಅಲಂಕರಿಸಬಹುದಾಗಿದೆ ಎಂದು ನುಡಿದರು.

ರೋಟರಿ ಕ್ಲಬ್ ಬೀದರ್ ಫೋರ್ಟ್ ಅಧ್ಯಕ್ಷ ಸತ್ಯಪ್ರಕಾಶ ಉಪಸ್ಥಿತರಿದ್ದರು. ಪ್ರೊ. ವಿಶ್ವನಾಥ ಕಿವಡೆ ಸ್ವಾಗತಿಸಿದರು. ಫಲಕ್ ಅಂಜುಂ ನಿರೂಪಿಸಿದರು. ಜ್ಯೋತಿ ಜೀರ್ಗೆ ವಂದಿಸಿದರು. ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ರೋಟರಿ ಕ್ಲಬ್ ಬೀದರ್ ಫೋರ್ಟ್ ಹಾಗೂ ಅಕ್ಕ ಮಹಾದೇವಿ ಮಹಿಳಾ ಕಾಲೇಜು ಹಳೆಯ ವಿದ್ಯಾರ್ಥಿನಿಯರ ಸಂಘದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.