ಉಪನ್ಯಾಸಕರಿಗೆ ಆನ್‍ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಆದೇಶ ನೀಡಲು ನಮೋಶಿ ಆಗ್ರಹ

ಕಲಬುರಗಿ.ಏ.22: ಉಪನ್ಯಾಸಕರಿಗೂ ಕೋವಿಡ್-19 ಸೋಂಕು ಪ್ರಕರಣಗಳು ಬಂದಿದ್ದು, ಆದ್ದರಿಂದ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಹಿತದೃಷ್ಟಿಯಿಂದ ಮನೆಯಿಂದಲೇ ಆನ್‍ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಆದೇಶ ನೀಡಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಶಶೀಲ್ ಜಿ. ನಮೋಶಿ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯದ ಪದವಿ ಪೂರ್ವ ಕಾಲೇಜುಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ಸುತ್ತೋಲೆ ಏಪ್ರಿಲ್ 20ರಂತೆ ಏಪ್ರಿಲ್ 22ರಿಂದ ಮೇ 4ರವರೆಗೆ ಭೌತಿಕ ತರಗತಿಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕೇವಲ ಆನ್‍ಲೈನ್ ತರಗತಿಗೆ ಮಾತ್ರ ಅವಕಾಶ ನೀಡಿರುವುದರಿಂದ ಎಲ್ಲ ಪಿಯು ಕಾಲೇಜುಗಳ ಉಪನ್ಯಾಸಕರೂ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವುದರಿಂದ ಈಗಾಗಲೇ ನೂರಾರು ಉಪನ್ಯಾಸಕರಿಗೂ ಕೋವಿಡ್ ಪಾಸಿಟಿವ್ ಬಂದಿದ್ದು, ಅದರ ಜೊತೆಗೆ ಕೆಲವು ಉಪನ್ಯಾಸಕರು ಪ್ರಾಣವನ್ನು ಕಳೆದುಕೊಂಡ ಉದಾಹರಣೆಗಳು ನಮ್ಮ ಕಣ್ಮುಂದಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಉಪನ್ಯಾಸಕರೊಂದಿಗೆ ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಪನ್ಯಾಸಕರು ತಮ್ಮ ಮನೆಯಿಂದಲೇ ಆನ್‍ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಆದೇಶವನ್ನು ನೀಡುವಂತೆ ಸಚಿವರಿಗೆ ಹಾಗೂ ಸಂಬಂಧಪಟ್ಟ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಮೋಶಿ ಅವರು ಕೋರಿದ್ದಾರೆ.