ಉಪನೋಂದಣಿ ಕಚೇರಿ ಎದುರು ಪ್ರತಿಭಟನೆಗೆ ರೈತರ ನಿರ್ಧಾರ

ಮುಳಬಾಗಲು; ಫೆ.೨೭- ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಲ್ಲಾಳಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಹಾವಳಿಗೆ ಕಡಿವಾಣ ಹಾಕಿ ಅಮಾಯಕ ಬಿಕ್ಲಂಗಳ ಹೆಸರಿನಲ್ಲಿ ಸರ್ಕಾರಿ ಆಸ್ತಿಗಳನ್ನು ನೋಂದಣಿ ಮಾಡಿಸುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ಫೆ.೨೮ರ ಬುಧವಾರ ಉಪನೋಂದಣಾಧಿಕಾರಿಗಳ ಕಚೇರಿ ಮುಂದೆ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಹೋರಾಟ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರ ಹೊರವಲಯದ ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ಸಭೆಯಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಅಮಾಯಕ ಬಿಕ್ಲಂ (ಜಿಲ್ಲಾ ಪತ್ರ ಬರಹಗಾರರು) ಹೆಸರಿನಲ್ಲಿ ಸರ್ಕಾರಿ ಆಸ್ತಿಗಳನ್ನು ಹಾಗೂ ನಕಲಿ ಮರಣ ಪ್ರಮಾಣ ಪತ್ರ ಸೃಷ್ಠಿ ಮಾಡಿ ಒಬ್ಬರ ಆಸ್ತಿಯನ್ನು ಮತ್ತೊಬ್ಬರಿಗೆ ನೋಂದಣಿ ಮಾಡುವ ದಂಧೆ ಕೋರರಿಗೆ ಕಡಿವಾಣ ಹಾಕಲು ಸರ್ಕಾರ ಎಷ್ಟೇ ಕಾನೂನು ಜಾರಿಗೆ ತಂದರೂ ಕಾನೂನುಗಳನ್ನು ಉಲ್ಲಂಘನೆ ಮಾಡಿ ಅಡ್ಡದಾರಿಯಲ್ಲಿ ನೋಂದಣಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದರೂ ಕ್ರಮಕೈಗೊಳ್ಳಬೇಕಾದ ಹಿರಿಯ ಅಧಿಕಾರಿಗಳು ಮೌನವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರ ಬರಹಗಾರರ ಪರವಾನಗಿ ಹೊಂದಿರುವ ಬರಹಗಾರರು ಛಾಪಾ ಕಾಗದ ಮಾರಾಟಗಾರರು ಮತ್ತು ಕರಾರು ಬರಹಗಾರರು (ಡೀಡ್ ರೈಟರ್‌ಗಳು) ಕಾನೂನಿನ ಪ್ರಕಾರ ಜಮೀನು ಮಾರಾಟ ಮಾಡುವ ಹಾಗೂ ಕೊಂಡುಕೊಳ್ಳುವವರಿಗೆ ಕಾಗದಗಳನ್ನು ಸೃಷ್ಠಿಸಿ ಅವರೇ ನೋಂದಣಿ ಮಾಡಿಸಲು ಬಿಕ್ಲಂದಾರರೇ ಜವಾಬ್ದಾರಿ ಹೊಂದಬೇಕು.
ಆದರೆ, ಬೇರೆ ಕಡೆ ಕಾಗದ ಸಿದ್ಧಪಡಿಸಿ ಅಮಾಯಕ ಬಿಕ್ಲಂದಾರರಿಂದ ಸೀಲ್ ಹಾಗೂ ಸಹಿ ಮಾಡಿಸಿಕೊಂಡು ಅಕ್ರಮವಾಗಿ ಉಪನೋಂದಣಾಧಿಕಾರಿಗಳ ಗಮನಕ್ಕೆ ಬಾರದೆ ಅಧಿಕಾರಿಗಳ ಹೆಸರಿನಲ್ಲಿ ಲಕ್ಷಲಕ್ಷ ಹಣವನ್ನು ಅಮಾಯಕ ರೈತರಿಂದ ವಸೂಲಿ ಮಾಡುವ ಮುಖಾಂತರ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಭ್ರಷ್ಟಾಚಾರದ ಕಚೇರಿಯನ್ನಾಗಿ ಮಾಡಿದ್ದಾರೆಂದು ಆರೋಪಿಸಿದರು.
ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಸರ್ಕಾರ ನೋಂದಣಿ ಇಲಾಖೆಯಲ್ಲಿ ಭ್ರಷ್ಟಾಚಾರ ತಡೆಯಲು ಒಂದು ಕಾನೂನು ತಂದರೆ ಆ ಕಾನೂನಿಗೆ ವಿರುದ್ಧವಾಗಿ ಕೆಲವು ಪತ್ರ ಬರಹಗಾರರು, ದಲ್ಲಾಳರು ರಿಯಲ್ ಎಸ್ಟೇಟ್ ಉದ್ಯಮಿಗಳು ಬೇರೆ ಕಾನೂನನ್ನು ಸೃಷ್ಠಿ ಮಾಡಿ ಸರ್ಕಾರಿ ಕೆರೆ, ಗೋಮಾಳ, ಗುಂಡುತೋಪುಗಳನ್ನು ನಕಲಿ ದಾಖಲೆ ಸೃಷ್ಠಿ ಮಾಡಿ ಕೋಟಿಕೋಟಿ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆಂದು ದಲ್ಲಾಳರ ವಿರುದ್ಧ ಕಿಡಿಕಾರಿದರು.
ಪಿ.ನಂಬರ್ ದುರಸ್ಥಿ ಮಾಡದೆ ನೋಂದಣಿ ಮಾಡುವಂತಿಲ್ಲ. ಆದರೆ ಕೆಲವು ದಲ್ಲಾಳರು ಮತ್ತು ಕಾನೂನು ಅರಿವು ಇರುವವರು ಕಾನೂನು ಉಲ್ಲಂಘನೆ ಮಾಡಿ ೧ ಎಕರೆ ಪಿ ನಂಬರ್ ನೋಂದಣಿ ಮಾಡಿಸಲು ೩ ರಿಂದ ೪ ಲಕ್ಷ ಲಂಚ ಪಡೆದು ದಲ್ಲಾಳರೇ ಉಪನೋಂದಣಾಧಿಕಾರಿಗಳ ಕೈಯಲ್ಲಿ ಭ್ರಷ್ಟಾಚಾರ ಮಾಡುವ ಮುಖಾಂತರ ನೋಂದಣಿ ಮಾಡಿಸುತ್ತಿದ್ದಾರೆಂದು ಆರೋಪಿಸಿದರು.
ಕೃಷಿ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ರಿಯಲ್ ಎಸ್ಟೇಟ್ ಉದ್ಯಮಿಗಳು ಆ ಭೂಮಿ ಸುತ್ತವಿರುವ ಗೋಮಾಳ, ಗುಂಡುತೋಪು, ಕೆರೆಯಂಗಳ ಜಾಗವನ್ನು ಒತ್ತುವರಿ ಮಾಡಿಕೊಂಡು ಕಂದಾಯ, ಸರ್ವೇ ಅಧಿಕಾರಿಗಳನ್ನು ಕೈಕಟ್ಟಿಕೊಂಡು ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಲೇಔಟ್ ಗಳನ್ನು ಮಾಡಿ ಅನಧಿಕೃತವಾಗಿ ಅಮಾಯಕ ರೈತ, ಕೂಲಿ ಕಾರ್ಮಿಕರಿಗೆ ಲಕ್ಷಲಕ್ಷಕ್ಕೆ ಮಾರಾಟ ಮಾಡಿ ಆ ಭೂಮಿಯನ್ನು ನೋಂದಣಿ ಇಲಾಖೆಯಲ್ಲಿ ನೋಂದಣಿ ಮಾಡುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಕನಸಿನ ಮನೆ ಕಟ್ಟುವ ಕೂಲಿಕಾರ್ಮಿಕರ ಬೆವರ ಹನಿ ಭ್ರಷ್ಟರ ಪಾಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೨೪ ಗಂಟೆಯಲ್ಲಿ ನೋಂದಣಿ ಇಲಾಖೆಯಲ್ಲಿ ಉಪನೋಂದಣಾಧಿಕಾರಿ ಗಳ ಹೆಸರಿನಲ್ಲಿ ಲಕ್ಷಲಕ್ಷ ಲೂಟಿ ಮಾಡುತ್ತಿರುವ ಪತ್ರ ಬರಹಗಾರರ ವಿರುದ್ಧ ಕ್ರಮಕೈಗೊಂಡು ಸರ್ಕಾರಿ ಆಸ್ತಿಗಳನ್ನು ನೋಂದಣಿ ಮಾಡುವ ಬಿಕ್ಲಂಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಸರ್ಕಾರಿ ಆಸ್ತಿಗಳನ್ನು ಉಳಿಸಬೇಕೆಂದು ಫೆ.೨೮ರ ಬುಧವಾರ ಇಲಾಖೆ ಮುಂದೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಹೋರಾಟ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಎಂದರು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್ ಪಾಷ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ರಾಜೇಶ್, ಸುನೀಲ್ ಕುಮಾರ್, ಭಾಸ್ಕರ್, ವಿಶ್ವ, ವಿಜಯ್‌ಪಾಲ್, ಜುಬೇರ್ ಪಾಷ, ಧರ್ಮ, ಮಂಜುನಾಥ್, ಹೆಬ್ಬಣಿ ಆನಂದರೆಡ್ಡಿ ಮುಂತಾದವರಿದ್ದರು.