ಉಪನಗರ ರೈಲ್ವೆ ಶೀಘ್ರ ಪೂರ್ಣ

ಬೆಂಗಳೂರು, ಫೆ. ೧೨- ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಈ ಯೋಜನೆಯ ಬೈಯ್ಯಪ್ಪನಹಳ್ಳಿ-ಚಿಕ್ಕಬಾಣವಾರ ಕಾರಿಡಾರ್‌ನ ಸಿವಿಲ್ ಕಾಮಗಾರಿ ಪ್ರಗತಿಯಲ್ಲಿದೆ. ಹೀಲಲಿಗೆ-ರಾಜನಕುಂಟೆ ಕಾರಿಡಾರ್‌ನ ಸಿವಿಲ್ ಕಾಮಗಾರಿಯ ಟೆಂಡರ್‌ನ್ನು ಅಂತಿಮಗೊಳಿಸಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು, ಕರ್ನಾಟಕ ರಾಜ್ಯದಲ್ಲಿ ಪ್ರಾದೇಶಿಕ ತ್ವರಿತ ಸಂಚಾರ ಹಾಗೂ ಸಂಪರ್ಕ ಕಲ್ಪಿಸಲು ಸರ್ಕಾರ ಬದ್ಧಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದೆ. ಈ ವರ್ಷ ವಿಜಯಪುರ ವಿಮಾನ ನಿಲ್ದಾಣ ಆರಂಭಿಸಲಾಗುವುದು. ಹಾಸನ ಹಾಗೂ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದರು.
ತಂತ್ರಜ್ಞಾನ ಕ್ಷೇತ್ರದಲ್ಲೂ ಸರ್ಕಾರ ಗಮನಾರ್ಹ ಸಾಧನೆ ಮಾಡಿದ್ದು, ಸ್ಟಾರ್ಟಪ್ ಶ್ರೇಯಾಂಕದಲ್ಲಿ ಉಳಿದ ರಾಜ್ಯಗಳಿಗಿಂತ ಕರ್ನಾಟಕ ಬಹಳ ಮುಂದೆ ಇದೆ. ಗ್ಲೋಬಲ್ ಇನಾಗ್ರೇಷನ್ ಹಬ್ ಕೂಡ ಕರ್ನಾಟಕ ಆಗಿದೆ. ದೇಶದ ಫಾರ್ಚೂನ್ ೫೦೦ ಕಂಪೆನಿಗಳಲ್ಲಿ ೪೦೦ಕ್ಕೂ ಹೆಚ್ಚು ಕಂಪೆನಿಗಳು ರಾಜ್ಯದಲ್ಲಿ ನೆಲೆಗೊಂಡಿವೆ. ಕರ್ನಾಟಕವು ವಿಶ್ವದ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಎಂದು ಗುರುತಿಸಲ್ಪಟ್ಟಿದೆ ಎಂದು ರಾಜ್ಯಪಾಲರು ಭಾಷಣದಲ್ಲಿ ಹೇಳಿದರು. ಭಾರತದ ಐಟಿ ರಫ್ತಿನಲ್ಲಿ ರಾಜ್ಯವು ಶೇ. ೪೦ಕ್ಕೂ ಹೆಚ್ಚು ಕೊಡುಗೆ ನೀಡುತ್ತಿದೆ ಮತ್ತು ಜೈವಿಕ ತಂತ್ರಜ್ಞಾನ ರಫ್ತಿನಲ್ಲಿ ಶೇ. ೩೩ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ. ರಾಜ್ಯದ ಜೈವಿಕ ಆರ್ಥಿಕತೆಯು ಸುಮಾರು ೨೫ ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ ಎಂದು ರಾಜ್ಯಪಾಲರು ಹೇಳಿದರು.
ನೀರಾವರಿಗೆ ಆದ್ಯತೆ
ನೀರಾವರಿ ಯೋಜನೆಗೂ ಸರ್ಕಾರ ಆದ್ಯತೆ ನೀಡಿದ್ದು, ೨೦೨೩-೨೪ರಲ್ಲಿ ಸೂಕ್ಷ್ಮ ನೀರಾವರಿ ಯೋಜನೆ ಅನುಷ್ಠಾನಕ್ಕೆ ೧೦೨.೮೪ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಜಲಸಂಪನ್ಮೂಲ ಇಲಾಖೆಗೆ ೨೦೨೩-೨೪ನೇ ಆಯವ್ಯಯದಲ್ಲಿ ೧೬೭೩೫.೪೯ ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಡಿಸೆಂಬರ್ ಅಂತ್ಯಕ್ಕೆ ೧೦,೩೫೭.೯೧ ಕೋಟಿ ರೂ.ಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಮತ್ತು ೩೧,೧೧೭ ಎಕರೆ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯವನ್ನು ಕಲ್ಪಿಸಲಾಗಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದರು.
ರಸ್ತೆ ಅಭಿವೃದ್ಧಿ
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ರಸ್ತೆಗಳ ಜಾಲ ಪ್ರಮುಖ ಪಾತ್ರ ವಹಿಸುವುದು. ಹಾಗಾಗಿ ಸರ್ಕಾರ ಉತ್ತಮ ಗುಣಮಟ್ಟದ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ಇತರೆ ರಸ್ತೆಗಳ ಅಭಿವೃದ್ಧಿ ಮತ್ತು ಸೇತುವೆಗಳ ನಿರ್ಮಾಣವನ್ನು ಸರ್ಕಾರದ ಅನುದಾನ ಮತ್ತು ಬಾಹ್ಯ ಅನುದಾನಗಳಲ್ಲಿ ವಿವಿಧ ಯೋಜನೆಗಳ ಮೂಲಕ ಅನುಷ್ಠಾನಗೊಳಿಸುತ್ತಿದೆ ಎಂದು ಅವರು ಹೇಳಿದರು.
ಪ್ರವಾಸೋದ್ಯಮ ಹೊಸ ನೀತಿ
ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ನೀತಿಯನ್ನು ಜಾರಿ ಮಾಡಲಾಗುತ್ತಿದ್ದು, ಪ್ರವಾಸೋದ್ಯಮದ ಮೂಲಕ ಶೈಕ್ಷಣಿಕ, ಐತಿಹಾಸಿಕ ಮತ್ತು ಪಾರಂಪರಿಕ, ವಾಣಿಜ್ಯ ಹಾಗೂ ವೃತ್ತಿಪರ ತಿಳುವಳಿಕೆ ಮೂಡಿಸಲು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಗಳನ್ನು, ಪ್ರಾಣಿ ಸಂಗ್ರಹಾಲಯ, ಅರಣ್ಯ ದರ್ಶನ ಮತ್ತು ಸಾಹಸ ಪ್ರವಾಸೋದ್ಯಮ ಇತ್ಯಾದಿಗಳನ್ನು ಉತ್ತೇಜಿಸಲು ಪರಿಣಾಮಕಾರಿಯಾದ ಅಂಶಗಳನ್ನು ಒಳಗೊಂಡ ಪ್ರವಾಸೋದ್ಯಮ ನೀತಿ ಮತ್ತು ಕಾರ್ಯಸೂಚಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ರಾಜ್ಯಪಾಲರು ಹೇಳಿದರು.