ಉಪನಗರ ರೈಲು ಯೋಜನೆ ಹಣ ನೀಡಲು ಸಂಪುಟ ಸಮ್ಮತಿ

ಬೆಂಗಳೂರು, ನ. ೧೨- ಬೆಂಗಳೂರು ಉಪನಗರ ರೈಲು ಯೋಜನೆ ಕನಸು ನನಸಾಗುತ್ತಿದ್ದು, ಉಪನಗರ ರೈಲ್ವೆ ಯೋಜನೆಗೆ ಅಗತ್ಯ ಹಣಕಾಸು ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆಯ ನಂತರ ಸಚಿವ ಸಂಪುಟದ ತೀರ್ಮಾನಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಬೆಂಗಳೂರು ಉಪನಗರ ರೈಲು ಯೋಜನೆಗೆ ಯೋಜನಾ ವೆಚ್ಚದ ಶೇ. ೬೦ ರಷ್ಟು ಹಣವನ್ನು ಸಾಲದ ರೂಪದಲ್ಲಿ ಯೋಜನಾ ವಿಶೇಷ ಉದ್ದೇಶ ವಾಹಕದ ಮೂಲಕ ಬಾಹ್ಯ ಅಭಿವೃದ್ಧಿ ಸಂಸ್ಥೆ ಅಥವಾ ದೇಶೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಅನುಮದೋನೆ ನೀಡಲಾಯಿತು ಎಂದರು.
ಈ ಉಪನಗರ ರೈಲು ಯೋಜನೆಗೆ ೧೮ ಸಾವಿರ ಕೋಟಿ ರೂ. ಈಗಾಗಲೇ ೩ ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, ಉಳಿದ ೧೫ ಸಾವಿರ ಕೋಟಿ ರೂ.ಗಳನ್ನು ಒದಗಿಸಿ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು ಎಂದರು.
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಚರ್ಚ್ ಸ್ಟ್ರೀಟ್‌ನ್ನು ಟೆಂಡರ್ ಶೂರ್ ಮಾದರಿಯಡಿಯ ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯ ೧೮.೭೨ ಕೋಟಿ ರೂ.ಗಳಿಗೆ ಪರಿಷ್ಕೃತ ಅಂದಾಜಿಗೂ ಸಂಪುಟ ಒಪ್ಪಿಗೆ ನೀಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಗರೀಕ ಸೌಲಭ್ಯಗಳ ಸೌಲಭ್ಯ ನಿವೇಶನಗಳ ಗುತ್ತಿಗೆ ಪಡೆದಿರುವ ವಿವಿಧ ಸಂಘ ಸಂಸ್ಥೆಗಳು ಪಾವತಿಸಲು ಬಾಕಿ ಇರುವ ಹಣವನ್ನು ಸಂಪೂರ್ಣವಾಗಿ ಪಾವತಿಸಲು ಮುಂದೆ ಬಂದಲ್ಲಿ ನಿಯಮಾನುಸಾರ ಬಾಕಿ ಹಣದ ಮೇಲೆ ವಿಧಿಸಲಾದ ಬಡ್ಡಿಯ ಒಟ್ಟು ಮೊತ್ತದ ಶೇ. ೫೦ ರಷ್ಟು ಬಡ್ಡಿ ಮನ್ನಾ ಮಾಡುವ ತೀರ್ಮಾನವನ್ನು ಸಂಪುಟ ಸಭೆ ಕೈಗೊಂಡಿದೆ ಎಂದರು.
ನಿರ್ಭಯ ಆಪ್‌ಗೆ ಅನುಷ್ಠಾನ
ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ನಿರ್ಭಯ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಮಂಜೂರು ಮಾಡಿರುವ ೪೦.೮೨ ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಸುರಕ್ಷತೆಯ ವೈಶಿಷ್ಟ್ಯತೆಯನ್ನು ಮೊಬೈಲ್ ಆಪ್‌ನ್ನು ರೂಪಿಸಲು ಸಂಪುಟ ಸಭೆ ಅನುಮೋದನೆ ನೀಡಿದ್ದು, ಇದೇ ಹಣ ಬಳಸಿ ಮೊಬೈಲ್ ಆಪ್ ಜತೆಗೆ ಬಸ್ ಒಳಗೆ ಕಣ್ಗಾವಲು ವ್ಯವಸ್ಥೆ, ಬಸ್ ನಿಲುಗಡೆ, ನಿಲ್ದಾಣಗಳಲ್ಲಿ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಪ್ರದರ್ಶಕಗಳನ್ನು ಅನುಷ್ಠಾನಗೊಳಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಅವರು ಹೇಳಿದರು.
ಹಾರಂಗಿ ಜಲಾಯನ ಪ್ರದೇಶ ಮತ್ತು ನದಿ ಪಾತ್ರದ ಪುನಶ್ಚೇತನದ ಹಾಗೂ ರಕ್ಷಣಾ ಕಾಮಗಾರಿಯ ೧೩೦ ಕೋಟಿ ರೂ.ಗಳ ಮೊತ್ತದ ಯೋಜನೆಗೂ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಗೆ ೧೩.೯೫ ಕೋಟಿ ರೂ., ಹಾಗೂ ಲಿಂಗಸೂಗೂರು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ೧೮.೮೨ ಕೋಟಿ ರೂ., ಹಾಗೂ ಕೊಡಗಿನ ಸೋಮವಾರಪೇಟೆ ನ್ಯಾಯಾಲಯ ಕಟ್ಟಡಕ್ಕ ೧೨.೮ ಕೋಟಿ ರೂ.ಗಳ ಮೊತ್ತದ ಅಂದಾಜು ಕಾಮಗಾರಿಗೂ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.
ಮಂಡ್ಯಾದ ಮೈಶುಗರ್ ಕಾರ್ಖಾನೆಯನ್ನು ಹೊರಗುತ್ತಿಗೆ ನೀಡುವ ತೀರ್ಮಾನವನ್ನು ಸಂಪುಟ ಸಭೆ ಕೈಗೊಂಡಿದೆ ಎಂದು ಅವರು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಐದು ಗ್ರಾ.ಪಂ.ಗಳಲ್ಲಿ ಬರುವ ೮೪ ಸಣ್ಣ ನೀರಾವರಿ ಮತ್ತು ಜಿ.ಪಂ. ಕೆರೆಗಳನ್ನು ಡೆಡ್ತಿ ನದಿಯ ಉಪನದಿಯಾದ ಕವಳಗಿ ಹಳ್ಳದಿಂದ ನೀರು ತುಂಬಿಸುವ ೨೨೫ ಕೋಟಿ ರೂ. ಮೊತ್ತದ ಯೋಜನೆಗೂ ಸರ್ಕಾರ ಒಪ್ಪಿಗೆ ನೀಡಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಯುವಿಟಿಇ ಬಾಲಕರ ಹಾಸ್ಟೆಲ್ ಹಾಗೂ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಮತ್ತು ಪಿಹೆಚ್‌ಡಿ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ೩೦.೮೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಯೋಜನೆಗೂ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು.
ಸರ್ವೋಚ್ಛ ನ್ಯಾಯಾಲಯ ಸಂಸದೀಯ ಕಾರ್ಯದರ್ಶಿಗಳ ಹುದ್ದೆಯ್ನು ರದ್ದು ಮಾಡಿಸಿರುವುದರಿಂದ ಸ ಂಸದೀಯ ಕಾರ್ಯದರ್ಶಿಗಳ ವೇತನ, ಭತ್ಯೆ ಪಾವತಿಯ ಕಾನೂನನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಎಂದರು
ಉಪಸಮಿತಿ
ಕಸ್ತೂರಿ ರಂಗನ್ ವರದಿ ಅನ್ವಯ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಗಳ ಧಾಮಗಳ ಸುತ್ತಲಿನ ಪ್ರದೇಶಗಳನ್ನು ಪರಿಸರ ಸೂಕ್ಷ್ಮವಲಯವೆಂದು ಘೋಷಿಸಲು ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲು ಸಚಿವ ಸಂಪುಟದ ಉಪಸಮಿತಿ ರಚಿಸಲು ತೀರ್ಮಾನಿಸಲಾಯಿತು. ಎಂದರು.
ಮುದ್ರಾಂಕ ಶುಲ್ಕ ಇಳಿಕೆ
ಕೈಗಾರಿಕಾ ಉದ್ದೇಶಗಳಿಗೆ ಜಮೀನು ಖರೀದಿಸುವವರಿಗೆ ಮುದ್ರಾಂಕ ಶುಲ್ಕವನ್ನು ೫ ರಿಂದ ೩ಕ್ಕೆ ಇಳಿಸಲು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.
ಹಾಗೆಯೇ ೨೦ ಲಕ್ಷಕ್ಕಿಂತ ಕಡಿಮೆ ಮೌಲ್ಯದ ಅಪಾರ್ಟ್‌ಮೆಂಟ್ ಅಥವಾ ಪ್ಲಾಟ್ ಖರೀದಿ ಮಾಡುವವರಿಗೂ ಮುದ್ರಾಂಕ ಶುಲ್ಕವನ್ನು ಶೇ. ೫ ರಿಂದ ೩ಕ್ಕೆ ಇಳಿಕೆ ಮಾಡುವ ತೀರ್ಮಾನವನ್ನು ಸಂಪುಟ ಸಭೆ ಕೈಗೊಂಡಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.