ಉಪಚುನಾವಣೆ ಸ್ಪರ್ಧಿಸಲಾರೆ: ವಿಜಿ

ಕಲಬುರಗಿ, ನ. ೧೩- ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ-ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ನನಗಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪರವರ ಪುತ್ರ ವಿಜೇಯೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ.
ಬಸವಕಲ್ಯಾಣಕ್ಕೆ ಹೋಗುವ ಮಾರ್ಗದ ಮಧ್ಯೆ, ಕಲಬುರರ್ಗಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪ-ಚುನಾವಣೆ ನಡೆಯಲಿದೆ. ಹೀಗಾಗಿ ಪಕ್ಷದ ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಬೆಂಗಳೂರು ಹಿಂತಿರುಗುವುದಾಗಿ ಅವರು ತಿಳಿಸಿದರು.
ಅಭ್ಯರ್ಥಿಗಳು ಯಾರಾಗಬೇಕೆಂಬುದನ್ನು ಪಕ್ಷ ನಿರ್ಧರಿಸಲಿದೆ. ಪಕ್ಷದ ಅಭ್ಯರ್ಥಿಗಳ ಜಯಕ್ಕೆ ಯಾವುದೇ ಕ್ಷೇತ್ರದ ಜವಾಬ್ದಾರಿಯನ್ನು ಪಕ್ಷ ವಹಿಸಿದರೆ ಶ್ರದ್ಧೆಯಿಂದ ಕೆಲಸ ನಿರ್ವಹಿಸುವುದಾಗಿ ಹೇಳಿದರು.
ಈ ಹಿಂದೆ ೧೫ ಕ್ಷೇತ್ರಗಳಿಗೆ ನಡೆದ ಉಪ-ಚುನಾವಣೆಯಲ್ಲಿ ೧೨ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಮೊನ್ನೆ ನಡೆದ ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪರವರ ಜನಪ್ರಿಯ ಕೆಲಸಗಳು ಪಕ್ಷದ ಅಭ್ಯರ್ಥಿಗಳು ಜಯಗಳಿಸಲು ಕಾರಣ ಎಂದು ಹೇಳಿದರು.
ಶಿರಾ ಕ್ಷೇತ್ರದ ಉಪ-ಚುನಾವಣೆ ಸವಾಲಿನಿಂದ ಕೂಡಿತ್ತು. ಕಾಂಗ್ರೇಸ್ ಹಾಗೂ ಜೆ.ಡಿ.(ಎಸ್) ಜಾತಿ ಆಧಾರದಲ್ಲಿ ಮತಯಾಚಿಸಿದವು. ಆದರೆ, ನಾವು ಅಭಿವೃದ್ಧಿ ಕಾರ್ಯ ಮುಂದಿಟ್ಟು ಮತ ಕೇಳಿದೆವು. ಹೀಗಾಗಿ ಪಕ್ಷದ ಅಭ್ಯರ್ಥಿ ಜಯಗಳಿಸಲು ಕಾರಣವಾಯಿತು ಎಂದು ಹೇಳಿದರು.
ಹಣದ ಆಮಿಷ ತೋರಿದ ಮಾತ್ರಕ್ಕೆ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕೆಂದು ಅವರು ತಿರುಗೇಟು ನೀಡಿದರು.