ಉಪಚುನಾವಣೆ ಪ್ರಚಾರ ಕಾರ್ಯದಿಂದ ಶಾಸಕ ಜಿಟಿಡಿ ದೂರ

ಮೈಸೂರು, ಅ.31: ರಾಜ್ಯದಲ್ಲಿ ಶಿರಾ, ರಾಜರಾಜೇಶ್ವರಿ ನಗರದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣಾ ಕಾವು ರಂಗೇರಿದೆಯಾದರೂ ಉಪಚುನಾವಣೆಯಿಂದ ಸಂಪೂರ್ಣವಾಗಿ ಶಾಸಕ ಜಿ.ಟಿ.ದೇವೇಗೌಡ ಅವರ ಕುಟುಂಬ ದೂರವೇ ಉಳಿದಿದೆ.
ಸದ್ಯಕ್ಕೆ ಶಾಸಕ ಜಿ.ಟಿ. ದೇವೇಗೌಡ ಅವರು ಏಕಾಂಗಿಯಾಗಿಯೇ ಇದ್ದಾರೆ. ಅತ್ತ ಜೆಡಿಎಸ್ ಗೂ ಹೋಗದೇ, ಇತ್ತ ಬಿಜೆಪಿಗೂ ಹೋಗದೇ ಶಾಸಕ ಜಿ.ಟಿ.ದೇವೇಗೌಡ ಅವರು ತಟಸ್ಥರಾಗಿಯೇ ಉಳಿದಿರುವುದು ಆಶ್ಚರ್ಯ ಮೂಡಿಸಿದೆ. ಶಿರಾ ಮತ್ತು ಆರ್.ಆರ್. ನಗರ ವಿಧಾನ ಸಭಾ ಕ್ಷೇತ್ರಗಳಿಗೆ ತೆರಳಿ ಮೈಸೂರು ಭಾಗದ ಶಾಸಕರು ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಮಾತ್ರ ಮೈಸೂರಿನಲ್ಲಿಯೇ ಉಳಿದಿದ್ದಾರೆ. ಜಿ.ಟಿ.ದೇವೇಗೌಡರ ಜೊತೆ ಅವರ ಪುತ್ರ ಜಿ.ಡಿ. ಹರೀಶ್ ಗೌಡ ಅವರೂ ಕೂಡ ತಟಸ್ಥರಾಗಿಯೇ ಉಳಿದಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಅವರು ಮೈಸೂರು ಭಾಗದ ಪವರ್ ಫುಲ್ ಲೀಡರ್ ಆಗಿದ್ದು, ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು.