ಉಪಚುನಾವಣೆ: ಕಣ್ಣು-ಕಿವಿಗಳಾಗಿ ಕರ್ತವ್ಯ ನಿರ್ವಹಿಸಿ: ಡಿಸಿ

ತುಮಕೂರು, ನ. ೧- ಸಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚುನಾವಣಾಧಿಕಾರಿಗಳ ಕಣ್ಣು ಮತ್ತು ಕಿವಿಗಳಾಗಿ ಚುನಾವಣಾ ಮತದಾನದ ದಿನದ ಕಡೆಯ ೭೨ ಗಂಟೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಕೆ. ರಾಕೇಶ್‌ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ನಡೆದ ಸಿರಾ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಮಾದರಿ ನೀತಿ ಸಂಹಿತೆ ಅನುಷ್ಠಾನದ ಸಂಬಂಧ ನೇಮಿಸಲಾಗಿರುವ ಹೋಬಳಿವಾರು ಉಸ್ತುವಾರಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಕಡೆಯ ೭೨ ಗಂಟೆಗಳ ಅಂದರೆ ಚುನಾವಣೆಯ ದಿನಾಂಕದ ಹಿಂದಿನ ೨ ದಿನಗಳ ಮತ್ತು ಮತದಾನದ ದಿನದಲ್ಲಿ ಸುಗಮ ಮತ್ತು ನೈತಿಕ ಚುನಾವಣೆ ನಡೆಸುವ ಸಂಬಂಧ ಹೋಬಳಿ ಮಟ್ಟದಲ್ಲಿ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿ ಇದ್ದು, ಹೋಬಳಿ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮಗಳ ಬಗ್ಗೆ ದೂರು ಬಂದಲ್ಲಿ ಈ ಕೊಠಡಿಯಿಂದ ಉಸ್ತುವಾರಿ ಅಧಿಕಾರಿಗಳಿಗೆ ಮಾಹಿತಿ ಒದಗಿಸಲಾಗುವುದು. ಅದರಂತೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಯಾವುದೇ ಅಕ್ರಮಗಳು ಕಂಡುಬಂದ ತಕ್ಷಣ ವಿಡಿಯೋ ಮಾಡಿಕೊಳ್ಳುವುದು ಮತ್ತು ಎಫ್.ಎಸ್.ಟಿ ತಂಡಕ್ಕೆ ಮಾಹಿತಿ ರವಾನಿಸಬೇಕು. ಅಲ್ಲದೇ ಕಡೆಯ ೭೨ ಗಂಟೆ, ೪೮ ಗಂಟೆ ಹಾಗೂ ಚುನಾವಣಾ ಮತದಾನದ ದಿನದಂದು ಸದಾ ರೌಂಡ್ಸ್‌ನಲ್ಲಿದ್ದು, ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಉಸ್ತುವಾರಿ ಅಧಿಕಾರಿಗಳಿಗೆ ಅವರು ತಿಳಿಸಿದರು.
ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಶುಭಾ ಕಲ್ಯಾಣ್ ಮಾತನಾಡಿ, ಮತದಾನದ ಪ್ರಚಾರ ಮುಗಿದ ತಕ್ಷಣ ಮತ ಕ್ಷೇತ್ರದ ಅಲ್ಲದ ವ್ಯಕ್ತಿಗಳು ಆ ಮತ ಕ್ಷೇತ್ರದಿಂದ ಹೋರಗೆ ಹೋಗಬೇಕಾಗಿದ್ದು, ಈ ಪ್ರಕ್ರಿಯೆಯು ಸಂಪೂರ್ಣವಾಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಹೋಬಳಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕ್ರಮಬದ್ಧವಲ್ಲದ ಸಭೆ ಸಮಾರಂಭ, ಮದುವೆ, ಆಹಾರ ವಿತರಣೆ, ನಗದು ವಿತರಣೆ, ವಸ್ತುಗಳ ವಿತರಣೆ ಪ್ರಕರಣಗಳು ನಡೆಯುತ್ತಿದ್ದಲ್ಲಿ ಸೂಕ್ತ ಪರಿಶೀಲನೆ ಮಾಡುವುದು ಮತ್ತು ನಿಯಮಾನುಸಾರ ಎಫ್‌ಎಸ್‌ಟಿ ತಂಡದವರಿಗೆ ಮಾಹಿತಿ ಒದಗಿಸಬೇಕು ಎಂದು ಅವರು ತಿಳಿಸಿದರು.
ಮತದಾನದ ಪ್ರಚಾರ ಅವಧಿ ಪೂರ್ಣಗೊಂಡ ನಂತರ ಯಾವುದೇ ಲೌಡ್ ಸ್ಪೀಕರ್ ಮೂಲಕ ಪ್ರಚಾರ ಕೈಗೊಳ್ಳತಕ್ಕದ್ದಲ್ಲ. ೫ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮನೆಮನೆ ಪ್ರಚಾರ ಮಾಡುವಂತಿಲ್ಲ. ಕೋವಿಡ್-೧೯ರ ಮಾರ್ಗಸೂಚಿಗಳ ಪಾಲನೆ ಕುರಿತಂತೆ ಕ್ರಮವಹಿಸಲು ಸೂಚಿಸಲಾಯಿತು. ರೂ ೫೦,೦೦೦ ಕ್ಕಿಂತ ಹೆಚ್ಚಿನ ನಗದು ಹಾಗೂ ರೂ ೧೦ ಸಾವಿರ ಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳು ಅನಧಿಕೃತ ಅಥವಾ ಅಕ್ರಮವಾಗಿ ದೊರೆತಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಲು ಕ್ರಮಹಿಸುವುದು. ಯಾವುದೇ ಕಾರಣಕ್ಕೂ ವೈಯಕ್ತಿಕವಾಗಿ ಮನೆಗಳ ತಪಾಸಣೆ ಕೈಗೊಳ್ಳಲು ನಿಮಗೆ ಅವಕಾಶವಿರುವುದಿಲ್ಲ. ಯಾವುದಾದರೂ ದೂರುಗಳು ಬಂದರೆ ಸಂಬಂಧಿಸಿದ ಅಧಿಕೃತ ಅಧಿಕಾರಿಗಳೊಂದಿಗೆ ತಪಾಸಣೆಗೆ ಕ್ರಮಕೈಗೊಳ್ಳಬಹುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾದರಿ ನೀತಿ ಸಂಹಿತೆ ಅನುಷ್ಟಾನದ ಸಂಬಂಧ ನೇಮಿಸಲಾಗಿರುವ ಅಧಿಕಾರಿಗಳು ಉಪಸ್ಥಿತರಿದ್ದರು.