ಉಪಕರಣ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ: ಭಾರೀ ನಷ್ಟ

ಮಂಗಳೂರು, ಜ.೯- ಇಲ್ಲಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿನ ಲೆಮಿನಾ ಬಿಡಿ ಉಪಕರಣಗಳ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೋಟ್ಯಂತರ ರೂ. ನಷ್ಟ ಸಂಭವಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಘಟಕದಲ್ಲಿ ಸಂಜೆ ವೇಳೆ ವಿದ್ಯುತ್ ಕಡಿತಗೊಂಡ ವೇಳೆ ದುರ್ಘಟನೆ ಸಂಭವಿಸಿದೆ. ಆಯಿಲ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಮೂರು ವಾಹನಗಳು, ಎಂಸಿಎಫ್ ಹಾಗೂ ಎಂಆರ್‌ಪಿಎಲ್‌ನ ತಲಾ ಒಂದೊಂದು ವಾಹನಗಳು ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಸಂಸ್ಥೆಗೆ ಭಾರೀ ನಷ್ಟವಾಗಿದೆ. ಹಾನಿಯಾದ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತಿದೆ. ಎರಡು ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿ ತಹಬದಿಗೆ ಬಂದಿತು ಎಂದು ಕದ್ರಿ ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.