ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು  ವಿದ್ಯಾರ್ಥಿಗಳ ಪ್ರತಿಭಟನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.28:  ಎಐಡಿಎಸ್ಓ  ಜಿಲ್ಲಾ ಸಮಿತಿಯಿಂದ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಪ್ರತಿಭಟನಾ ಸಪ್ತಾಹ ಹಿನ್ನೆಲೆಯಲ್ಲಿ  ಇಂದು  ಪದವಿ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ  ಮುಖ್ಯಮಂತ್ರಿ ಅವರಿಗೆ  ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ. ಸರ್ಕಾರಿ ಕಾಲೇಜುಗಳಲ್ಲಿನ ಶುಲ್ಕ ಏರಿಕೆ, ಸರ್ಕಾರಿ ಸಂಸ್ಥೆಗಳನ್ನು ಸ್ವಾಯತ್ತ ಸಂಸ್ಥೆಗಳನ್ನಾಗಿ ಮಾಡುತ್ತಿರುವುದು ಎನ್.ಇ.ಪಿಯ ಒಂದು ಭಾಗವಾಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದಲೇ ದೂರ ಉಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ವಿದ್ಯಾರ್ಥಿ ವೇತನ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೂಕ್ತ ಬಸ್ ಹಾಗೂ ಹಾಸ್ಟೆಲ್ ಸೌಲಭ್ಯವಿಲ್ಲದಿರುವುದು, ಸಮರ್ಪಕವಾಗಿ ತರಗತಿಗಳನ್ನು ನಡೆಸಲು ಶಿಕ್ಷಕರ ಕೊರತೆ ಇವೆಲ್ಲವೂ ವಿದ್ಯಾರ್ಥಿಗಳ ಶೈಕ್ಷಣಿಕ ಕನಸಿಗೆ ತಿಲಾಂಜಲಿ ಇಡುತ್ತಿವೆ. ಇಂತಹ ಪರಿಸ್ಥಿತಿಯಿಂದ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ರಕ್ಷಿಸಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯವನ್ನು ಹಸನಾಗಿಸುವ ತುರ್ತು ಅವಶ್ಯಕತೆಯಿದೆ ಎಂದರು
ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಐಡಿಎಸ್ಓ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯರು ಎಂ. ಶಾಂತಿ ಅವರು ವಹಿಸಿದ್ದರು. ಪ್ರತಿಭಟನೆಯಲ್ಲಿ ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ಈರಣ್ಣ, ಸೆಕ್ರೆಟರಿಯೇಟ್ ಸದಸ್ಯರು ಅನುಪಮ, ಸಿದ್ದು, ಉಮಾ ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.